ನಂಜನಗೂಡು: ಒತ್ತುವರಿಯಾಗಿರುವ ರಸ್ತೆ ತೆರುವುಗೊಳಿಸುವಂತೆ ಕುಟುಂಬವೊಂದು ಕಳೆದ ಮೂರು ವರ್ಷಗಳಿಂದ ತಾಲ್ಲೂಕು ಕಛೇರಿಗೆ ಅಲೆದಾಡುತ್ತಿರುವ ಪ್ರಕರಣ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.

ರಸ್ತೆ ಅಳತೆ ಮಾಡಿ ಒತ್ತುವರಿ ಆಗಿದ್ದಲ್ಲಿ ಕ್ರಮ ವಹಿಸುವಂತೆ ತಹಶೀಲ್ದಾರ್ ಮೂರು ವರ್ಷದ ಹಿಂದೆ ಆರ್.ಐ ಹಾಗೂ ಭೂಮಾಪಕರಿಗೆ ಅತಿಜರೂರು ಪತ್ರ ಬರೆದರೂ ನಿರ್ಲಕ್ಷಿಸಲಾಗಿದೆ. ತಾಲ್ಲೂಕು ಕಚೇರಿಗೆ ಅಲೆದಾಡಿ ಹೈರಾಣಾದ ಕುಟುಂಬ ಕಚೇರಿ ಮುಂದೆ ಪ್ರತಿಭಟನೆಗೆ ಕುಳಿತಿದೆ. ನಂಜನಗೂಡು ತಾಲ್ಲೂಕು ಕಸಬಾ ಹೋಬಳಿ ಸಿಂಧುವಳ್ಳಿ ಗ್ರಾಮದ ಸರ್ವೆ ನಂ.95/9 ರಲ್ಲಿ ಕಾಳಿ ಹುಂಡಿ ಗ್ರಾಮದ ಶಿವಣ್ಣ ತಮ್ಮ ಜಮೀನಿನಲ್ಲಿ ಪುಟ್ಟ ಮನೆ ನಿರ್ಮಿಸಿಕೊಂಡು ಕುಟುಂಬ ಸಮೇತ ವಾಸವಿದೆ.

ಓಡಾಡಲು ಮೀಸಲಿದ್ದ ಓಣಿ ರಸ್ತೆಯನ್ನ ನೆರೆಯವರು ಒತ್ತುವರಿ ಮಾಡಿಕೊಂಡ ಪರಿಣಾಮ ಶಿವಣ್ಣ ಕುಟುಂಬ ಓಡಾಡಲು ತೊಂದರೆಯಾಗಿದೆ. ಒತ್ತುವರಿಯಾಗಿರುವ ರಸ್ತೆಯನ್ನ ತೆರುವುಗೊಳಿಸಿ ನಮಗೆ ಮುಕ್ತವಾಗಿ ಓಡಾಡಲು ಅನುವು ಮಾಡಿಕೊಡುವಂತೆ ಶಿವಣ್ಣ ತಾಲ್ಲೂಕು ಕಚೇರಿಗೆ ನಿರಂತರವಾಗಿ ಮನವಿ ಪತ್ರಗಳನ್ನ ಕೊಟ್ಟಿದ್ದಾರೆ. ಶಿವಣ್ಣ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಆರ್.ಐ ಹಾಗೂ ಭೂಮಾಪಕರಿಗೆ ಅತಿಜರೂರು ಪತ್ರ ಬರೆದು ಅಳತೆ ಮಾಡಿ ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ.

ಪತ್ರ ಬರೆದು ಮೂರು ವರ್ಷ ಕಳೆದರೂ ಭೂಮಾಪಕರು ಕ್ಯಾರೆ ಎಂದಿಲ್ಲ. ತಹಶೀಲ್ದಾರ್ ಪತ್ರಕ್ಕೂ ಮನ್ನಣೆ ಸಿಕ್ಕಿಲ್ಲ. ನ್ಯಾಯಕ್ಕಾಗಿ ಹೋರಾಡಿ ಹೈರಾಣಾದ ಕುಟುಂಬ ಪ್ರತಿಭಟನೆ ಹಾದಿ ಹಿಡಿದಿದೆ. ರೈತ ಮುಖಂಡರ ನೆರವಿನಿಂದ ರೆವಿನ್ಯೂ ಕಚೇರಿ ಮುಂದೆ ಡಾ.ಬಿ ಆರ್.ಅಂಬೇಡ್ಕರ್, ಮಹಾತ್ಮಗಾಂಧಿ, ಪ್ರೊ.ನಂಜುಂಡಸ್ವಾಮಿ ರವರ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿಗೆ ಇದೊಂದು ನಿದರ್ಶನ. ಹಿರಿಯ ಅಧಿಕಾರಿಗಳ ಸೂಚನೆ ಪಾಲಿಸುವಲ್ಲೂ ನಿರ್ಲಕ್ಷ್ಯ ಧೋರಣೆ ತೋರುವ ಇಂತಹ ಅಧಿಕಾರಿಗಳ ವಿರುದ್ದ ಕ್ರಮ ಇಲ್ಲವೇ..? ಹಲವು ವರ್ಷಗಳಿಂದ ರಸ್ತೆಗಾಗಿ ಹೋರಾಟ ನಡೆಸುತ್ತಿರುವ ಈ ಕುಟುಂಬಕ್ಕೆ ನ್ಯಾಯ ಸಿಗುವುದೇ ಕಾದು ನೋಡಬೇಕಿದೆ…?