ನಂಜನಗೂಡು: ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಕಂದಾಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ನಂಜನಗೂಡು ತಾಲ್ಲೂಕಿನ ಗಡಿ ಗ್ರಾಮವಾದ ಹರಗನಪುರ ಮತ್ತು ಹೆಳವರಹುಂಡಿ ಗ್ರಾಮಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದೊಡ್ಡ ಕವಲಂದೆ ಕಂದಾಯ ಇಲಾಖೆ ವತಿಯಿಂದ ಸರ್ಕಾರಿ ಶಾಲಾ ಮಕ್ಕಳ ಸಮ್ಮುಖದಲ್ಲಿ ಕಂದಾಯ ದಿನ ಆಚರಣೆ ಮಾಡಿರುವುದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕವಲಂದೆಯ ನಾಡ ಕಛೇರಿಯ ಉಪ ತಹಶೀಲ್ದಾರ್ ಎನ್.ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮಕ್ಕಳಿಗೆ ಉಪ ತಹಶೀಲ್ದಾರ್ ಎನ್. ಕಿರಣ್ ಕುಮಾರ್ ಮತ್ತು ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.

ಬಳಿಕ ಉಪ ತಹಶೀಲ್ದಾರ್ ಎನ್.ಕಿರಣ್ ಕುಮಾರ್ ಮಾತನಾಡಿ, ದೊಡ್ಡ ಕವಲಂದೆ ಹೋಬಳಿಯಲ್ಲಿ ಕಂದಾಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಬೇಕೆಂದು ಹರಗನಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು, ಸುಮಾರು 25ಕ್ಕೂ ಹೆಚ್ಚು ಮಕ್ಕಳಿಗೆ ನೋಟ್ ಬುಕ್, ಬ್ಯಾಗ್, ನೀರಿನ ಬಾಟಲ್ ಸೇರಿದಂತೆ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಕಲಿಕಾ ಸಾಮಗ್ರಿಗಳನ್ನು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೇವೆ.

ಇದೇ ರೀತಿ ಪ್ರತಿಯೊಬ್ಬರು ಸರ್ಕಾರಿ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಿದರೆ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು. ಈ ಹಿಂದೆ ಕಂದಾಯ ದಿನಾಚರಣೆಯನ್ನು ನಾಡಕಛೇರಿ ಮತ್ತು ತಾಲ್ಲೂಕು ಕಛೇರಿಗಳಲ್ಲಿ ಆಚರಣೆ ಮಾಡುತ್ತಿದ್ದೇವು ಆದರೆ, ಇಂದು ಶಾಲಾ ಮಕ್ಕಳೊಂದಿಗೆ ಆಚರಣೆ ಮಾಡಿರುವುದು ಸಂತಸ ತಂದಿದೆ ಎಂದರು.

ನಂತರ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ಮಕ್ಕಳಿಗೆ ನೀಡಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಾದರೆ ಪೋಷಕರು ಮತ್ತು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯುತ್ತವೆ ಇಲ್ಲದಿದ್ದರೆ ಮುಚ್ಚಲಾಗುತ್ತದೆ ಎಂದು ಎಚ್ಚರಿಸಿದರು.

ಕಂದಾಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಸಲುವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಆಚರಣೆ ಮಾಡಿರುವುದು ನಮ್ಮ ಕಂದಾಯ ಇಲಾಖೆಗೆ ಹೆಮ್ಮೆ ತಂದಿದೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎನ್. ಕಿರಣ್ ಕುಮಾರ್, ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ, ಶಾಲಾ ಮುಖ್ಯ ಶಿಕ್ಷಕ ಮಹದೇವಸ್ವಾಮಿ, ಸಹ ಶಿಕ್ಷಕ ಬಸವರಾಜು, ಗ್ರಾಮ ಆಡಳಿತ ಅಧಿಕಾರಿ ಕೆ.ಸಿದ್ದಾರ್ಥ್, ಕೆ.ನಾಗೇಶಪ್ಪ, ಪ್ರಭು ಕುಮಾರ್, ಹಿಮ್ಮತ್, ಸಚಿನ್ ತಳವಾರ್, ವಾಣಿ ಶ್ರೀ, ರಾಜಮಣಿ, ಮೋನಿಕಾ, ಶೃತಿ ಹಾಗೂ ದೊಡ್ಡ ಕವಲಂದೆ ಹೋಬಳಿಯ ಎಲ್ಲಾ ಗ್ರಾಮ ಸಹಾಯಕರು ಸೇರಿದಂತೆ ಹಲವರು ಭಾಗವಹಿಸಿದ್ದರು.