ಮೈಸೂರು: ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2025 ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಅರವಿಂದ್ ನಗರದಲ್ಲಿರುವ ಜೆಎಸ್ಎಸ್ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸುವ ಮೂಲಕ 2025ರ ಕ್ಯಾಲೆಂಡರ್ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಕೆಎಂಪಿಕೆ ಟ್ರಸ್ಟ್ ಸದಸ್ಯರು ಈಗಾಗಲೇ ಒಂದು ತಿಂಗಳ ಕಾಲ ಪ್ರತಿದಿನ ರಾತ್ರಿ ಮೈಸೂರು ನಗರದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಫುಟ್ ಪಾತ್ ಹಾಗೂ ಲಾರಿ ಕೆಳಗಡೆ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಸ್ಥಳಕ್ಕೆ ತೆರಳಿ ಹೊದಿಕೆ ನೀಡಿ ಮಾನವೀಯತೆ ಮೆರೆದ ಟ್ರಸ್ಟ್ ಸದಸ್ಯರ ಕಾರ್ಯ ಶ್ಲಾಘನೀಯ.
ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಮೋಜು ಮಸ್ತಿ ಮಾಡಲು ಸ್ನೇಹಿತರೊಡನೆ ಮೈಮರೆತು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುವ ಇಂತಹ ಸಂದರ್ಭದಲ್ಲೂ ಹಿರಿಯ ನಾಗರಿಕರಿಗೆ ಹೊದಿಕೆ ವಿತರಿಸುವ ಮೂಲಕ ಕ್ಯಾಲೆಂಡರ್ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿರುವುದು ಪ್ರಶಂಸನೀಯ ಎಂದರು.
ಬಿಜೆಪಿ ನಗರ ಉಪಾಧ್ಯಕ್ಷರಾದ ಹೇಮಾನಂದೀಶ್ ಮಾತನಾಡಿ ಹವಾಮಾನ ಏರುಪೇರು, ತಂಡಿ ಶೀತಗಾಳಿ ಹೆಚ್ಚಿರುವ ಹಿನ್ನಲೆಯಲ್ಲಿ ಅಶಕ್ತರು ನಿರಾಶ್ರಿತರಿಗೆ ಹಾಗೂ ಹಿರಿಯ ನಾಗರಿಕರಿಗೆ ನೆರವಾಗಲು ಹೊದಿಕೆ ನೀಡುತ್ತಿರುವುದು ಅರ್ಥಪೂರ್ಣವಾಗಿದೆ. ನಗರ ಮಟ್ಟದಲ್ಲಿ ವೃದ್ದಾಶ್ರಮಗಳಿಗೆ ಸರ್ಕಾರಗಳು ತೆರಿಗೆ ವಿನಾಯಿತಿ, ಉಚಿತ ವಿದ್ಯುತ್ ನೀರು ಪೊರೈಕೆ ಸಹಾಯಧನ ಸೌಲಭ್ಯಗಳು ನೀಡಲು ಮುಂದಾಗಬೇಕು ಎಂದರು.
ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್, ಪ್ರಿಯದರ್ಶನ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಆಲನಹಳ್ಳಿ ಎಂ.ಎನ್.ಚೇತನ್ ಗೌಡ, ನಂದೀಶ್, ಅರಸು, ನಿಲಯ ಪಾಲಕ ಬಸವಣ್ಣ ಹಾಗೂ ಇನ್ನಿತರರು ಹಾಜರಿದ್ದರು.

