ಮೈಸೂರು: ದಸರಾ ಆನೆ ಅರ್ಜುನನ ಸಾಧನೆಯ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವ ಸ್ಥಳ ಇದೀಗ ವಿವಾದಕ್ಕೆ ಕಾರಣವಾಗಿದೆ. ಮೈಸೂರಿನ ಬನ್ನಿಮಂಟಪದ ಎಲ್‌ಐಸಿ ಕಚೇರಿ ಮುಂಭಾಗದ ವೃತ್ತದಲ್ಲಿ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದ್ದು, ಈ ಸಂಬಂಧ ಶಾಸಕ ತನ್ವೀರ್ ಸೇಠ್ ಹಾಗೂ ಸಂಸದ ಯದುವೀರ್ ಒಡೆಯರ್ ಸಭೆ ನಡೆಸಿದ್ದಾರೆ.

ಆದರೆ, ಈ ವೃತ್ತಕ್ಕೆ ಈಗಾಗಲೇ ಮಾಜಿ ಸಚಿವ ಟಿ.ಎನ್. ನರಸಿಂಹಮೂರ್ತಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. 2003ರಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಈಗಾಗಲೇ ವೃತ್ತದಲ್ಲಿ ಅವರ ಹೆಸರಿನ ನಾಮಫಲಕವನ್ನೂ ಅಳವಡಿಸಲಾಗಿದೆ.

ಇದೀಗ ಅದೇ ಸ್ಥಳದಲ್ಲಿ ಅರ್ಜುನ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟನೆಗಳ ಮುಖಂಡರು, ಅರ್ಜುನ ಸ್ಮಾರಕ ನಿರ್ಮಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದನ್ನು ಬೇರೆಡೆ ನಿರ್ಮಿಸಬೇಕು. ಹೈವೇ ವೃತ್ತದಲ್ಲಿ ಸ್ಮಾರಕ ನಿರ್ಮಿಸಿ, ಈಗಾಗಲೇ ನಾಮಕರಣಗೊಂಡಿರುವ ದಲಿತ ನಾಯಕ ಟಿ.ಎನ್. ನರಸಿಂಹಮೂರ್ತಿ ವೃತ್ತದ ಹೆಸರನ್ನು ಬದಲಾಯಿಸುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗೋವಿಂದರಾಜು ಹಾಗೂ ಪ್ರಸನ್ನ ಚಕ್ರವರ್ತಿ ಮಾತನಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.