ನಂಜನಗೂಡು: ಕುಡಿಯುವ ನೀರಿಲ್ಲ, ಶೌಚಾಲಯಗಳು ದುಸ್ಥಿತಿ, ಪ್ರಯೋಗಾಲಯಗಳಲ್ಲಿ ಸಲಕರಣೆಗಳಿಲ್ಲ, ಗ್ರಂಥಾಲಯವೂ ಇಲ್ಲ. ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆ ನಂಜನಗೂಡಿನ ದೇಬೂರು ಆದರ್ಶ ಸರ್ಕಾರಿ ಪದವಿ ಪೂರ್ವ ಕಾಲೇಜಿನ 178ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಕಾಲೇಜಿನ ಶೌಚಾಲಯಗಳ ಬಾಗಿಲುಗಳು ಮುರಿದುಬಿದ್ದಿದ್ದು, ನೀರಿನ ವ್ಯವಸ್ಥೆಯಿಲ್ಲದೆ ಗಬ್ಬುನಾರುತ್ತಿದೆ. ಹಾಳಾದ ವಿದ್ಯುತ್ ಸ್ವಿಚ್ ಬೋರ್ಡ್‌ಗಳ ಜೊತೆಗೆ ಕಾಲೇಜು ಕಟ್ಟಡದಲ್ಲೇ ಹೆಜ್ಜೇನು ಗೂಡು ಕಟ್ಟಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಪ್ರಯೋಗಾಲಯಗಳಲ್ಲಿ ಅಗತ್ಯ ಸಲಕರಣೆಗಳಿಲ್ಲದೆ ಕೇವಲ ಟೇಬಲ್‌ಗಳಿಗೆ ಸೀಮಿತವಾಗಿವೆ. ಕಾಲೇಜಿನಲ್ಲಿ ಗ್ರಂಥಾಲಯದ ವ್ಯವಸ್ಥೆಯೂ ಇಲ್ಲ ಎನ್ನಲಾಗಿದೆ. ಇನ್ನು ಕಾಲೇಜು ಅಭಿವೃದ್ಧಿ ಸಮಿತಿಯೇ ರಚನೆಯಾಗಿಲ್ಲ. ಆದರೆ ವಿದ್ಯಾರ್ಥಿಗಳಿಂದ ಅಭಿವೃದ್ಧಿ ಶುಲ್ಕವೆಂದು ₹800 ಸೇರಿದಂತೆ ವಿವಿಧ ಶುಲ್ಕಗಳನ್ನು ಸಂಗ್ರಹಿಸಲಾಗಿದೆ.

ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಎಸ್‌ಸಿ-ಎಸ್‌ಟಿ ಹಾಗೂ ಪ್ರವರ್ಗ-1 ಬಾಲಕರು ಮತ್ತು ಎಲ್ಲಾ ಸಮುದಾಯದ ಬಾಲಕಿಯರಿಂದ 1,070, ರೂ. ಪ್ರವರ್ಗ 2ಎ, 2ಬಿ, 3ಎ, 3ಬಿ ಬಾಲಕರಿಂದ 1,611ರೂ. ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ 1,761 ರೂ. ಸಂಗ್ರಹಿಸಲಾಗಿದೆ ಎನ್ನಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಎಸ್‌ಸಿ-ಎಸ್‌ಟಿ ಹಾಗೂ ಪ್ರವರ್ಗ-1 ಬಾಲಕರು ಮತ್ತು ಎಲ್ಲಾ ಸಮುದಾಯದ ಬಾಲಕಿಯರಿಂದ 1,095 ರೂ. ವಾಣಿಜ್ಯ ವಿಭಾಗದ ಪ್ರವರ್ಗ 2ಎ, 2ಬಿ, 3ಎ, 3ಬಿ ಬಾಲಕರಿಂದ 1,551 ರೂ. ಸಂಗ್ರಹಿಸಲಾಗಿದೆ.

ಎನ್‌ಎಸ್‌ಎಸ್ ಘಟಕವೇ ಇಲ್ಲದಿದ್ದರೂ ಎನ್‌ಎಸ್‌ಎಸ್ ಶುಲ್ಕ ಏಕೆ? ಎಂಬ ಪ್ರಶ್ನೆಯೂ ಇದೀಗ ಕೇಳಿಬಂದಿದೆ. ಮೂಲಸೌಕರ್ಯಗಳ ಕೊರತೆಯಿಂದ ಈಗಾಗಲೇ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವರ್ಗಾವಣೆ ಪಡೆದು ಬೇರೆ ಕಾಲೇಜುಗಳಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಅವರು ಪಾವತಿಸಿರುವ ಹಣವನ್ನು ಹಿಂದಿರುಗಿಸಿಲ್ಲ ಎಂಬ ಆರೋಪವೂ ಇದೆ. ಕಾಲೇಜಿನಲ್ಲಿ ಖಾಯಂ ಉಪನ್ಯಾಸಕರಿಲ್ಲದೆ 9 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳು, ರಾಷ್ಟ್ರೀಯ ನಾಯಕರ ಜಯಂತಿಗಳು ಹಾಗೂ ಸಾಂಸ್ಕೃತಿಕ-ಕ್ರೀಡಾ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ಸಮರ್ಪಕ ಅವಕಾಶ ನೀಡುತ್ತಿಲ್ಲ. ಮೈಸೂರು ದಸರಾದ ಯುವ ಸಂಭ್ರಮಕ್ಕೂ ಪ್ರಾಂಶುಪಾಲರು ಬ್ರೇಕ್ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಕಾಲೇಜಿನ ಪ್ರಾಂಶುಪಾಲ ಕೆಂಡಗಣ್ಣಸ್ವಾಮಿ ಅವರು ಹೆಡಿಯಾಲ ಸರ್ಕಾರಿ ಪಿಯು ಕಾಲೇಜಿನ ಜೊತೆಗೆ ದೇಬೂರು ಆದರ್ಶ ಪಿಯು ಕಾಲೇಜಿನ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದು, ಕಾಲೇಜಿಗೆ ಸಮರ್ಪಕವಾಗಿ ಭೇಟಿ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕ ಹಾಗೂ ಸರ್ಕಾರಿ ಅನುದಾನವನ್ನು ಪ್ರಾಂಶುಪಾಲರು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು‌. ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ ಒತ್ತಾಯಿಸಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕಾಲೇಜಿನ ಮುಂದೆ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

-ಸಿ.ಎಂ ಸುಗಂಧರಾಜು ನ್ಯೂಸ್ ಕರ್ನಾಟಕ ಮೈಸೂರು.