ನಂಜನಗೂಡು: ತಾಲ್ಲೂಕಿನ ಕಸಬಾ ಹೋಬಳಿಯ ದೇವಿರಮ್ಮನಹಳ್ಳಿ ಗ್ರಾಮದಲ್ಲಿರುವ ಕೆರೆಗೆ ಚರಂಡಿ ನೀರು ಸೇರುತ್ತಿದ್ದು, ಕೆರೆ ಮಲಿನಗೊಳ್ಳುತ್ತಿರುವ ಪರಿಣಾಮ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ನಂಜನಗೂಡು ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೇವಿರಮ್ಮನಹಳ್ಳಿ ಗ್ರಾ.ಪಂ ವ್ಯಾಪ್ತಿಗೆ ಸೇರಿದ ಗ್ರಾಮದಲ್ಲಿ ಸುಮಾರು 1500 ಜನಸಂಖ್ಯೆ ಇದೆ. ಗ್ರಾಮದಲ್ಲಿರುವ ಕೆರೆಯು ಸುಮಾರು 12 ಎಕರೆ ವಿಸ್ತೀರ್ಣವನ್ನು ಹೊಂದಿದೆ.

ದೇವಿರಮ್ಮನಹಳ್ಳಿ ಕೆರೆಯ ಮೇಲ್ಬಾಗದಲ್ಲಿರುವ ರಾಮಸ್ವಾಮಿ ಲೇಔಟ್, ನೀಲಂಬಿಕೆ ನಗರ, ಪಗು ಹಳಕಟ್ಟಿ ನಗರ, ಪ್ರಗತಿ ನಗರ, ಜುಬಿಲೆಂಟ್ ಲೇಔಟ್, ಹಾಗೂ ದೇವೀರಮ್ಮನಹಳ್ಳಿ ಗ್ರಾಮದಿಂದ ಒಳಚರಂಡಿ ಹಾಗೂ ಮೋರಿ ನೀರು ನೇರವಾಗಿ ಕೆರೆಗೆ ಹರಿಯುತ್ತಿದೆ. ಪರಿಣಾಮ ಕೆರೆ ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೊಳಚೆ ನೀರು ಸೇರುತ್ತಿರುವ ಬಗ್ಗೆ ದೇವಿರಮ್ಮನಹಳ್ಳಿ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿಗೆ ಹಲವಾರು ಬಾರಿ ದೂರು ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.

ಕೆರೆಗೆ ಮಲಿನ ನೀರು ಸೇರುತ್ತಿರುವ ಜೊತೆಗೆ ಕೆರೆ ಆವರಣವೂ ಕಸದ ತೊಟ್ಟಿಯಾಗಿ ಬದಲಾವಣೆಯಾಗುತ್ತಿದೆ. ಸಾಮಾನ್ಯ ಪ್ರಜ್ಞೆ ಇಲ್ಲದ ಕೆಲವು ಸಾರ್ವಜನಿಕರು ತಮ್ಮ ಮನೆಯ ಕಸ ಕಡ್ಡಿಗಳನ್ನು ಕೆರೆಗೆ ತಂದು ಬಿಸಾಕುವುದು ಮಾಮೂಲಿಯಾಗಿದೆ. ಈ ಹಿಂದೆ ಕೆರೆಗಳು ನೀರಿನ ಪ್ರಮುಖ ಮೂಲಗಳಾಗಿದ್ದವು. ಕುಡಿಯಲು ಸೇರಿದಂತೆ ಮನೆ ಬಳಕೆಯ ಎಲ್ಲಾ ಉದ್ದೇಶಗಳಿಗೂ ಕೆರೆಯ ನೀರನ್ನು ಬಳಕೆ ಮಾಡುತ್ತಿದ್ದರು.

ಆದರೆ ಇತ್ತೀಚೆಗೆ ಆಧುನಿಕತೆಯ ಭರಾಟೆಯಿಂದ ಕೆರೆಕಟ್ಟೆಗಳು ಮಾಯವಾಗುವುದರ ಜೊತೆಗೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲ ಮೂಲಗಳು ಕಲುಷಿತಗೊಳ್ಳುತ್ತಿವೆ. ಕೆರೆಯ ನೀರನ್ನು ಅವಲಂಬಿಸಿರುವ ಪ್ರಾಣಿ ಪಕ್ಷಿಗಳಿಗೆ ಕಂಟಕ ಪ್ರಾಯವಾಗುವುದರ ಜೊತೆಗೆ ಹಲವು ಸಾಂಕ್ರಾಮಿಕ ರೋಗಗಳ ತಾಣವಾಗಿ ಬದಲಾವಣೆಗೊಳ್ಳುತ್ತಿವೆ. ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಲುಷಿತಗೊಳ್ಳುತ್ತಿರುವ ಇಂತಹ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಗಬ್ಬು ವಾಸನೆ: ಜಲಚರಗಳಿಗೆ ಅಪಾಯ
ವಿವಿಧ ಬಡಾವಣೆಗಳ ಕಲುಷಿತ ನೀರು ಕೆರೆಗೆ ಸೇರ್ಪಡೆಯಾಗುತ್ತಿರುವುದರಿಂದ ಕೆರೆ ಗಬ್ಬುನಾರುತ್ತಿದೆ. ಕೆರೆಯಲ್ಲಿ ಸಾಕಷ್ಟು ಜಲಚರಗಳು ಮೀನುಗಳು ದಿನ ನಿತ್ಯ ಸಾವನ್ನಪ್ಪುತ್ತಿವೆ. ಜಲಚರಗಳ ಜೊತೆಗೆ ಆವರಣದಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳು ವಾಸ ಮಾಡುತ್ತಿವೆ. ಈ ನೀರು ಕುಡಿಯುವ ಪ್ರಾಣಿ ಪಕ್ಷಿಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಕೆರಿಯರ್ ಪಕ್ಕದಲ್ಲಿರುವ ಬೋರ್ವೆಲ್ ನೀರಿಗೂ ಗಂಡಾಂತರ ಎದುರಾಗಿದೆ. ಇದೇ ಬೋರ್ ವೆಲ್ ಗಳಿಂದ ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತಿದ್ದು, ಕುಡಿಯುವ ನೀರು ಕೂಡ ಕಲುಷಿತವಾಗುವ ಮುನ್ಸೂಚನೆ ಎದುರಾಗಿದೆ.

ದೇವಿರಮ್ಮನಳ್ಳಿ ಗ್ರಾಮದಲ್ಲಿರುವ ಕೆರೆಯು ಸುಮಾರು 12 ಎಕರೆ ಪ್ರದೇಶವನ್ನು ಹೊಂದಿದ್ದು, ಕೆರೆಯ ಮೇಲ್ಭಾಗದಲ್ಲಿರುವ ನಂಜನಗೂಡು ಪಟ್ಟಣದ ವಿವಿಧ ಬಡಾವಣೆಗಳ ಕೊಳಚೆ ನೀರು , ಕೆರೆಗೆ ಸೇರುತ್ತಿದೆ. ಕೆರೆಗೆ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಹಲವಾರು ಬಾರಿ ಸ್ಥಳೀಯ ಗ್ರಾಮ ಪಂಚಾಯಿತಿ ಸೇರಿದಂತೆ, ತಾಲ್ಲೂಕು ಪಂಚಾಯಿತಿ ಹಾಗೂ ತಹಶೀಲ್ದಾರ್ ಅವರಿಗೆ ದೂರು ನೀಡಿದರು ಕೂಡ ಗಮನ ಹರಿಸುತ್ತಿಲ್ಲ. ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಮುಂದೊಂದು ದಿನ ಕೆರೆಯೂ ಮತ್ತಷ್ಟು ಮಲಿನಗೊಂಡು ಗ್ರಾಮದಲ್ಲಿ ವಾಸ ಮಾಡಲು ಸಾಧ್ಯವಿಲ್ಲದಂತಾಗಿ, ಸಾಂಕ್ರಾಮಿಕ ರೋಗಗಳು ಹರಡುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆರೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಪ್ರಭುಸ್ವಾಮಿ, ದೇವಿರಮ್ಮನಹಳ್ಳಿ ಗ್ರಾಮಸ್ಥರು ಹೇಳಿದರು.

ದೇವಿರಮ್ಮನಹಳ್ಳಿ ಕೆರೆಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಸಂಬಂಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆದುಕೊಂಡು ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಿವಕುಮಾರ್ ಕಾಸ್ನೂರು, ತಹಶೀಲ್ದಾರ್ ನಂಜನಗೂಡು ಹೇಳಿದರು.