ನಂಜನಗೂಡು: ಅಜ್ಞಾನವೆಂಬ ಕತ್ತಲನ್ನು ಜ್ಞಾನವೆಂಬ ಬೆಳಕಿನಿಂದ ಹೋಗಲಾಡಿಸ ಬೇಕು ಎಂದು ಶ್ರೀ ಮುರುಗೀಸ್ವಾಮಿ ವಿರಕ್ತ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಗೀಸ್ವಾಮೀಜಿ ಹೇಳಿದರು.

ನಂಜನಗೂಡು ತಾಲ್ಲೂಕಿನ ಶಿರಮಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಬೆಂಗಳೂರು, ಜೆಎಸ್ಎಸ್ ಮಹಾವಿದ್ಯಾಪೀಠ ಮೈಸೂರು, ಹುಲ್ಲಹಳ್ಳಿ ಜೆಎಸ್ಎಸ್ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಶಿಬಿರಾರ್ಥಿಗಳು ಶ್ರಮವಹಿಸಿ ಹಳ್ಳಿಗಳಲ್ಲಿ ಶ್ರಮದಾನ ನಡೆಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ನಿಷ್ಠೆಯಿಂದ ಜನರೊಡನೆ ಬೆರೆತು ನಿಸ್ವಾರ್ಥ ಸೇವೆಯನ್ನು ಮಾಡಬೇಕು ಎಂದರು.

ನಂತರ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಗಾಂಧೀಜಿ ಕಂಡ ಕನಸು. ಹಳ್ಳಿಗಳಲ್ಲಿ ಇಂತಹ ಶ್ರಮದಾನ ನಡೆಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಹಳ್ಳಿಗಳ ಉದ್ಧಾರದಿಂದ ಮಾತ್ರ ದೇಶದ ಉದ್ಧಾರ ಸಾಧ್ಯ. ಭೇದ-ಭಾವ ಮರೆತು ನಿಸ್ವಾರ್ಥದಿಂದ ಆತ್ಮತೃಪ್ತಿಗಾಗಿ ಕೆಲಸ ನಿರ್ವಹಿಸಬೇಕು ಎಂದರು.
ಹುಲ್ಲಹಳ್ಳಿ ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರಾದ ಎಂ.ಪಿ ರೇವಣ್ಣ ಮಾತನಾಡಿ, ವಿದ್ಯಾರ್ಥಿಗಳು ಪರಿಪೂರ್ಣವಾಗಿ ಬೆಳೆಯಲು, ವ್ಯಕ್ತಿತ್ವ ವೃದ್ಧಿಸಿಕೊಳ್ಳಲು, ಓದುವುದರ ಜತೆಗೆ ಸಮಾಜದ ಜವಾಬ್ದಾರಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆ ಅವಶ್ಯವಾಗಿದೆ ಎಂದು ಹೇಳಿದರು.

ಪಿಎಸ್ಐ ಚೇತನ್ ಕುಮಾರ್ ಮಾತನಾಡಿ, ಯುವ ಪೀಳಿಗೆ ಭಾರತ ದೇಶವನ್ನು ಮೌಡ್ಯಮುಕ್ತ ದೇಶವನ್ನಾಗಿ ಮಾಡಬೇಕು. ಯುವಕರು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇದಕ್ಕೆ ಎನ್ನೆಸ್ಸೆಸ್ ವೇದಿಕೆ ಸಹಕಾರಿಯಾಗಿದೆ. ವ್ಯಕ್ತಿ ವಿಕಸನ ಹೊಂದಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಕಲೆ, ಸಂಸ್ಕೃತಿಯನ್ನು ಉಳಿಸಬೇಕು. ಗ್ರಾಮವನ್ನು ಸ್ವಚ್ಛ ಮಾಡುವುದಲ್ಲದೆ ಗ್ರಾಮಸ್ಥರ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಇಮ್ಮಡಿ ಮುರುಗೀಸ್ವಾಮೀಜಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾಪಂ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷೆ ರತ್ನಮ್ಮ, ಪ್ರಾಂಶುಪಾಲರಾದ ಎಂ.ಪಿ ರೇವಣ್ಣ, ಪಿಎಸ್ಐ ಚೇತನ್ ಕುಮಾರ್, ಪಿಡಿಒ ಯಾಸೀನ್ ಶರೀಫ್, ಗ್ರಾಮ ಆಡಳಿತ ಅಧಿಕಾರಿ ರಂಜಿನಿ, ಮುಖ್ಯ ಶಿಕ್ಷಕ ಮಹೇಶ್, ಗ್ರಾಪಂ ಸದಸ್ಯರಾದ ನಂದೀಶ್, ಪ್ರಭುಸ್ವಾಮಿ, ಪ್ರೇಮ, ಮಹದೇವಮ್ಮ, ಮಹದೇವ, ಅಂಕಶಟ್ಟಿ, ದ್ವಾರಕೀಶ್, ಗೌರಮ್ಮ, ಮುಖಂಡರಾದ ರಾಜಶೇಖರ ಮೂರ್ತಿ, ಮಾದೇಗೌಡ, ಬಸವರಾಜು, ಮಂಜೇಶ್, ಮಹೇಶ್, ಮಹದೇವಸ್ವಾಮಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.