ನಂಜನಗೂಡು: ಉಪ್ಪಾರ ಜನಾಂಗಕ್ಕೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಜಾತಿ ಜನಗಣತಿಯನ್ನು ಮರು ಪರಿಶೀಲನೆ ಮಾಡಬೇಕು ಎಂದು ಉಪ್ಪಾರ ಸಮುದಾಯದ ತಾಲ್ಲೂಕು ಮುಖಂಡ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಮ್ಮರಗಾಲ ಸೋಮಣ್ಣ ಆಗ್ರಹಿಸಿದರು.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದ್ಯಂತ ನಮ್ಮ ಉಪ್ಪಾರ ಜನಾಂಗದ ವಿಚಾರದಲ್ಲಿ ಸರ್ಕಾರ ಅನ್ಯಾಯ ಮಾಡಿದೆ. 30 ಲಕ್ಷ ಇರುವ ಜನರನ್ನು 7 ಲಕ್ಷ ಇದೆ ಎಂದು ಹೇಳುತ್ತಿದೆ.

ಈ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಇದಕ್ಕೆ ನಮ್ಮ ವಿರೋಧವಿದೆ. ಮುಖ್ಯಮಂತ್ರಿಗಳು ಇದನ್ನು ಪರಿಶೀಲಿಸಿ, ಉಪ್ಪಾರ ಸಮುದಾಯ ಹೆಚ್ಚು ಜನಸಂಖ್ಯೆ ಇರುವುದರಿಂದ ಮಾನ್ಯತೆ ನೀಡಬೇಕು. ಜಾತಿ ಜನಗಣತಿ ವರದಿ ತಪ್ಪಾಗಿದೆ. ಇದನ್ನು ಈ ಕೂಡಲೇ ಸರಿಪಡಿಸಬೇಕು. ಎಲ್ಲೋ ಕುಳಿತುಕೊಂಡು ಜಯಪ್ರಕಾಶ್ ಹೆಗ್ಡೆ ಎನ್ನುವವರು ತಪ್ಪು ಮಾಹಿತಿಯನ್ನು ನೀಡಿದ್ದಾರೆ.

ಸರ್ವೆ ಆಗಿರುವುದೇ ಒಂದು ಅವರು ನೀಡಿರುವುದೇ ಮತ್ತೊಂದು. ಎಲ್ಲೋ ಕುಳಿತುಕೊಂಡು ದೂರವಾಣಿ ಕರೆ ಮೂಲಕ ಕೊಟ್ಟಿರುವ ಮಾಹಿತಿ ಸರಿ ಇಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದನ್ನು ಮರು ಪರಿಶೀಲನೆ ಮಾಡಿ, ನಮ್ಮ ಜನಾಂಗಕ್ಕೆ ಬರುವ ಸೌಲಭ್ಯಗಳನ್ನು ನೀಡಬೇಕು. ನಮ್ಮ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಉಪ್ಪಾರ ಸಮುದಾಯ 30 ಲಕ್ಷ ಜನಸಂಖ್ಯೆ ಇದೆ ಎಂಬ ನಿರೀಕ್ಷೆ ಇತ್ತು. ಆದರೆ 7 ಲಕ್ಷ ಜನರಿದ್ದಾರೆ ಎಂದು ವರದಿ ಕೊಟ್ಟಿದ್ದಾರೆ.

ಚಾಮರಾಜನಗರ, ಬೆಳಗಾಂ, ಗೋಕಾಕ್, ಮೈಸೂರು, ಕೊಪ್ಪಳ, ಸುರಾಪುರ, ಸೇರಿದಂತೆ 15 ಜಿಲ್ಲೆಗಳಲ್ಲಿ ಉಪ್ಪಾರ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನೆಗಳಿಗೆ ತೆರಳದೆ ಜಾತಿಗಣತಿ ಮಾಡಿದ್ದಾರೆ. ನಮ್ಮ ಸಮುದಾಯದ ಶಾಸಕರಾದ ಪುಟ್ಟರಂಗ ಶೆಟ್ಟಿ ರವರ ಗಮನಕ್ಕೆ ತಂದಿದ್ದೇವೆ. ಅವರು ಕೂಡ ಸರ್ಕಾರಕ್ಕೆ ಎರಡು ಬಾರಿ ಮನವಿ ಮಾಡಿದ್ದಾರೆ. ಒಂದು ಮರು ಪರಿಶೀಲನೆ ಮಾಡದೆ ಇದ್ದಲ್ಲಿ ನಮ್ಮ ಸಮುದಾಯದ ಪುರುಷೋತ್ತಮಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮುಖಂಡರಾದ ಗಜೇಂದ್ರ, ಮಹೇಶ್, ರಂಗಸ್ವಾಮಿ, ಪುಟ್ಟಸ್ವಾಮಿ, ಮಹದೇವಸ್ವಾಮಿ, ಗೋಳೂರು ಕಾಳಪ್ಪ, ಸತೀಶ್, ಬಸವರಾಜು, ನಾಗರಾಜು ಹಾಜರಿದ್ದರು.