ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿ ಬರಪೀಡಿತ ಪ್ರದೇಶವಾಗಿದ್ದು, ಕೆರೆಗೆ ನೀರು ತುಂಬಿಸುವಂತೆ ಕೃಷ್ಣಾರಾಜಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಸಮೀಪದ ಕೃಷ್ಣರಾಜಪುರ ಗ್ರಾಮದಲ್ಲಿರುಲ ಎಳಚಿತಳಕಟ್ಟೆ ಕೆರೆಗೆ ನೀರು ತುಂಬಿಸಬೇಕಿದೆ. ಸುಮಾರು 3 ಎಕರೆ ಪ್ರದೇಶದಲ್ಲಿರುವ ಕೆಆರ್ ಪುರ ಗ್ರಾಮದ ಕೆರೆಯೂ ಮಳೆ ನೀರು ಬಂದು ತುಂಬುತ್ತಿತ್ತು. ಆದರೆ ಈಗ ಕೆರೆಗೆ ಮಳೆ ನೀರು ಬರುತ್ತಿಲ್ಲ. ಮುಂಬರುವ ಬೇಸಿಗೆಗೆ ಜನ ಜಾನುವಾರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.

ಕೆರೆಗೆ ನೀರು ತುಂಬಿಸಿದರೆ ಜಾನುವಾರುಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಅಂತರ್ಜಾಲವು ಹೆಚ್ಚಾಗಲಿದೆ. ಕಪಿಲಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಕೋಣನೂರು ಕೆರೆಗೆ ನೀರು ತುಂಬಿಸಲಾಗುತ್ತಿದೆ. ಕೋಣನೂರು ಕೆರೆಗೆ ಹೋಗಿರುವ ಪೈಪ್ ಲೈನ್ ಈ ಮಾರ್ಗವಾಗಿ ಹಾದುಹೋಗಿದೆ. ಕೆ.ಆರ್ ಪುರ ಕೆರೆಯ ಸಮೀಪದಲ್ಲೇ ನೂರು ಮೀಟರ್ ದೂರದಲ್ಲಿ ಪೈಪ್ ಲೈನ್ ಇದೆ.

ಸಮೀಪದಲ್ಲೇ ಇರುವ ಪೈಪ್ ಲೈನ್ ಮೂಲಕ ಕೆರೆಗೆ ನೀರು ಬಿಡಬಹುದು. ಈಗಾಗಲೇ ಕೆರೆಗೆ ನೀರು ತುಂಬಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಒಂದು ವಾರದೊಳಗೆ ಕೆರೆಗೆ ನೀರು ತುಂಬಿಸಬೇಕು. ಇಲ್ಲವಾದಲ್ಲಿ ಕೆ.ಆರ್ ಪುರ ಗ್ರಾಮದಿಂದ ದೊಡ್ಡಕವಲಂದೆ ಗ್ರಾಮದ ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.