ನಂಜನಗೂಡು: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರೈತರಿಗೆ 50 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಡಿ.11 ರಂದು ಬೆಳಗಾಂ ಅಧಿವೇಶನ ಚಲೋ ನಡೆಸಲಾಗುತ್ತಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಹೇಳಿದರು.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಬೆಳಗಾಂ ಗುರ್ಲಾಪುರ ಹೋರಾಟ ನಡೆದ ಮೇಲೆ ದೊಡ್ಡ ಮಟ್ಟದ ಹೋರಾಟವನ್ನು ನಡೆಸಲಾಗುತ್ತಿದೆ. ಡಿ.11ರಂದು ಬೆಳಗಾಂ ಅಧಿವೇಶನ ಚಲೋ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ. ಸರ್ಕಾರಕ್ಕೆ ಹಕ್ಕೋತ್ತಾಯಗಳನ್ನು ಮಂಡನೆ ಮಾಡುತಿದ್ದೇವೆ. ರಾಜ್ಯದಲ್ಲಿ 224 ಶಾಸಕರು, 28 ಸಂಸದರು ಇದ್ದಾರೆ.

ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ರೈತರ ಪರವಾಗಿ ವಿಚಾರಗಳನ್ನು ಮಂಡನೆ ಮಾಡದೆ ರೈತರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕು. 224 ಶಾಸಕರಿಗೂ ಹಕ್ಕೋತ್ತಾಯ ಪತ್ರಗಳನ್ನು ಕೊಡುತ್ತಿದ್ದೇವೆ. ಹಕ್ಕೋತ್ತಾಯ ಪತ್ರದ ಆಧಾರದ ಮೇಲೆ ಶಾಸಕರು ಚರ್ಚೆ ಮಾಡಬೇಕು. ಪ್ರತಿಯೊಂದು ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವಂತೆ ಹೋರಾಟ ಮಾಡುತ್ತಿದ್ದೇವೆ. ಗುರ್ಲಾಪುರ ಹೋರಾಟದಲ್ಲಿ ಕಬ್ಬಿಗೆ 3300 ಗಳನ್ನು ನಿಗದಿ ಮಾಡಿದ್ದಾರೆ. ದಕ್ಷಿಣ ಭಾಗದ ಕಬ್ಬಿಗೆ ಇನ್ನೂ ಕೂಡ ಬೆಲೆಯನ್ನು ನಿಗದಿ ಮಾಡಿಲ್ಲ.

ಬೆಳಗಾಂನಲ್ಲಿ ಮಾಡಿರುವ ರೀತಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಮಾಡಬೇಕು. ಯಾವುದೇ ಸರ್ಕಾರ ಬಂದರೂ ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿದ್ದೇವೆ ಎಂದು ಹೇಳುವುದು ವಾಡಿಕೆಯಾಗಿದೆ. ಕನಿಷ್ಠ ರೈತರ ರಕ್ಷಣೆಗೆ ಮತ್ತು ಬೆಳೆಗಳ ರಕ್ಷಣೆಗೆ 50 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಬೆಳಗಾಂ ಅಧಿವೇಶನ ಚಲೋ ನಡೆಸಲಾಗುತ್ತಿದೆ.  ಮೈಸೂರು ಮತ್ತು ಚಾಮರಾಜನಗರ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ನಾಗರಾಜಯ್ಯ, ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ತಾಲ್ಲೂಕು ಉಪಾಧ್ಯಕ್ಷ ದೊಡ್ಡೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಸೋಮಣ್ಣ, ರವಿ, ಮಹದೇವ ನಾಯಕ ಸೇರಿದಂತೆ ಹಲವರು ಹಾಜರಿದ್ದರು.