ಮೈಸೂರು: ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆ ಸಫಾರಿ ಮಾರ್ಗದಲ್ಲಿ ಇಂದು ಮುಂಜಾನೆ ಪ್ರವಾಸಿಗರು ನೋಡಿದ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿತು. ಸೀಳುನಾಯಿಗಳ ಗುಂಪೊಂದು ಜೀವಂತ ಜಿಂಕೆಯೊಂದನ್ನು ಬೇಟೆಯಾಡಿ ಕಿತ್ತು ತಿನ್ನುತ್ತಿದ್ದ ದೃಶ್ಯ ಸಫಾರಿಗೆ ಹೋಗಿದ್ದ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.
ಈ ಭೀಕರ ದೃಶ್ಯವನ್ನು ಸಫಾರಿ ಚಾಲಕ ಪ್ರದೀಪ್ ಅವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಜಿಂಕೆಯನ್ನು ಸುತ್ತುವರಿದ ಸೀಳುನಾಯಿಗಳ ಗುಂಪು ಅದನ್ನು ಜೀವಂತವಾಗಿಯೇ ಕಡಿದು ತಿನ್ನುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು ಮುಂಜಾನೆ ಸಫಾರಿಗೆ ತೆರಳಿದ್ದ ಪ್ರವಾಸಿಗರು ಈ ದೃಶ್ಯವನ್ನು ನೋಡಿ ದಿಗ್ಭ್ರಮೆಗೊಂಡರು. ಪ್ರಕೃತಿಯ ಕ್ರೌರ್ಯವನ್ನು ಕಣ್ಣಾರೆ ಕಂಡ ಪ್ರವಾಸಿಗರು ಮರುಗಿದರು. ಅರಣ್ಯ ನಿಯಮದ ಪ್ರಕಾರ ಇದು ಸಹಜವಾದ ಬೇಟೆ ಪ್ರಕ್ರಿಯೆಯಾದರೂ, ಜೀವಂತವಾಗಿ ತಿನ್ನುವ ದೃಶ್ಯ ಮನ ಕಲಕುವಂತಿತ್ತು ಎಂದು ಸಫಾರಿಗರು ಹೇಳಿದರು.

