ನಂಜನಗೂಡು: ದೇಶದಲ್ಲಿ ಗೋ ಹತ್ಯೆಯನ್ನು ನಿಷೇಧ ಮಾಡಬೇಕು. ಗೋವನ್ನು ರಾಷ್ಟ್ರೀಯ ಎರಡನೇ ಪ್ರಾಣಿ ಎಂದು ಘೋಷಣೆ ಮಾಡಬೇಕು ಎಂದು ಹಂಗರಹಳ್ಳಿಯ ಕೆ.ಜಿ ದೇವಪಟ್ಟಣದ ಶೃಂಗೇರಿ ಶಾರದಾ ಪೀಠ, ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯಾನಂದ ಸ್ವಾಮೀಜಿ ಹೇಳಿದರು.

ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿಯ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋ ಹತ್ಯ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಗೋವನ್ನು ರಾಷ್ಟ್ರೀಯ ಎರಡನೇ ಪ್ರಾಣಿ ಎಂದು ಘೋಷಣೆ ಮಾಡಬೇಕು. ಆಗ ಮಾತ್ರ ಭಾರತ ಮುಕ್ತವಾಗುತ್ತದೆ. ಹಣ ಇಲ್ಲ, ಒಡವೆ ಇಲ್ಲ ಅಂತ ಬಡತನ ಆಗ್ತಾ ಇಲ್ಲ. ಗೋ ಹತ್ಯೆ ದಿಂದಲೇ ಬಡತನ ಆಗುತ್ತಿದೆ. ಗೋವುಗಳನ್ನು ಹತ್ಯೆ ಮಾಡುವುದರಿಂದ ಮನಸ್ಸುಗಳು ಕಲುಷಿತವಾಗುತ್ತಿದೆ. ಆದ್ದರಿಂದ ನಾವು ನಂಜನಗೂಡಿನಿಂದಲೇ ವಿಜಯಯಾತ್ರೆ ಮಾಡುತ್ತಿದ್ದೇವೆ.

ಗೋಮಾತೆಯ ಹಾಲು ಕುಡಿಯುತ್ತೇವೆ. ಆನೆ, ಜಿಂಕೆ, ಹುಲಿ ಪ್ರಾಣಿಗಳಿಗೆ ಗೌರವ ಕೊಟ್ಟಿದ್ದೇವೆ. ಆದರೆ, ಸನಾತನ ಧರ್ಮವನ್ನು ಉಳಿಸಿರುವ ಗೋಮಾತೆಗೆ ರಕ್ಷಣೆ ಇಲ್ಲ ಯಾಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದೇವೆ. ಪ್ರಧಾನಿಗಳು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಸುವಿನ ಹಾಲು ಕುಡಿದು ಬೆಳೆದಿದ್ದಾರೆ.

ನೂರಾರು ಹಸುಗಳನ್ನು ಪ್ರತಿದಿನ ಲಾರಿಗಳಲ್ಲಿ ಸಾಗಿಸುತ್ತಿರುವುದು ನೋಡುತ್ತಿದ್ದೇವೆ. ಗೋ ಹತ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಬೇಕು. ಡಾ.ಬಿ.ಆರ್ ಅಂಬೇಡ್ಕರ್ ಅವರು ಕಾನೂನು ರಚನೆ ಮಾಡಿದ್ದಾರೆ, ಅದನ್ನು ಚಾಚು ತಪ್ಪದೇ ಪಾಲನೆ ಮಾಡಬೇಕು. ಹಿಂದೂ ಧರ್ಮವನ್ನು ಎಲ್ಲರೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು.