ನಂಜನಗೂಡು: ರಾಜ್ಯವನ್ನು ತಕ್ಷಣವೇ ಭೀಕರ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಮತ್ತು ಕಳೆದ ನಾಲ್ಕು ತಿಂಗಳಿಂದ ತಡೆಹಿಡಿದಿರುವ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ನಂಜನಗೂಡು ತಾಲ್ಲೂಕು ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಹಳೆ ಮೈಸೂರು ಭಾಗ ಸೇರಿದಂತೆ 24ಕ್ಕೂ ಹೆಚ್ಚು ಜಿಲ್ಲೆಗಳು ಬರದ ತೀವ್ರತೆಯನ್ನು ಎದುರಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯದಲ್ಲಿ ವಾಡಿಕೆಗಿಂತ ಸುಮಾರು ಶೇ.52ರಷ್ಟು ಮಳೆ ಕೊರತೆಯಾಗಿದ್ದು, ಮುಂಗಾರು ಬಿತ್ತನೆ ಗಂಭೀರವಾಗಿ ಕುಂಠಿತಗೊಂಡಿದೆ. ಸುಮಾರು 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದರೂ, ಜುಲೈ ಮಧ್ಯಭಾಗದವರೆಗೆ ಕೇವಲ 32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಹೆಸರು, ಉದ್ದು ಹಾಗೂ ಶೇಂಗಾ ಸೇರಿದಂತೆ ಹಲವು ಬೆಳೆಗಳು ವ್ಯಾಪಕವಾಗಿ ಹಾನಿಗೊಳಗಾಗಿದ್ದು, ರೈತರು ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿಯೂ ಮಳೆ ಕೊರತೆಯಿಂದ ಭತ್ತ, ರಾಗಿ, ಜೋಳ, ಕಬ್ಬು, ಮೆಕ್ಕೆಜೋಳ ಹಾಗೂ ತರಕಾರಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ಕೆರೆ-ಕಟ್ಟೆಗಳು, ಜಲಾಶಯಗಳು ಮತ್ತು ಅಂತರ್ಜಲ ಮಟ್ಟ ಕುಸಿದ ಪರಿಣಾಮ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು-ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಬಡ ಕುಟುಂಬಗಳ ಜೀವನೋಪಾಯ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.
ಇದರ ನಡುವೆಯೇ ಕಳೆದ ನಾಲ್ಕು ತಿಂಗಳುಗಳಿಂದ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ವಿಕಲಚೇತನರ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ತಡೆಹಿಡಿದಿರುವುದರಿಂದ ಸಾವಿರಾರು ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಜೀವ ರಕ್ಷಕ ಔಷಧಿಗಳನ್ನು ಖರೀದಿಸಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧರು ಪ್ರತಿದಿನ ತಾಲ್ಲೂಕು ಕಛೇರಿ ಮತ್ತು ಬ್ಯಾಂಕುಗಳಿಗೆ ಅಲೆದಾಡುತ್ತಿದ್ದರೂ ಪಿಂಚಣಿ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಯಾವುದೇ ಸಮರ್ಪಕ ಮುನ್ಸೂಚನೆ ನೀಡದೆ ಪಿಂಚಣಿಯನ್ನು ಸ್ಥಗಿತಗೊಳಿಸಿರುವುದಲ್ಲದೆ, ವಾರ್ಷಿಕ ₹32,000 ಆದಾಯ ಮಿತಿಯಂತಹ ಅವೈಜ್ಞಾನಿಕ ಹೊಸ ಮಾನದಂಡಗಳನ್ನು ಜಾರಿಗೊಳಿಸಲು ಮುಂದಾಗಿರುವುದು ಬಡವರನ್ನು ಸಾಮಾಜಿಕ ಭದ್ರತಾ ಯೋಜನೆಗಳಿಂದ ವಂಚಿಸುವ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇಡೀ ಕರ್ನಾಟಕವನ್ನು ತಕ್ಷಣವೇ ಭೀಕರ ಬರಗಾಲ ಪೀಡಿತ ರಾಜ್ಯ ಎಂದು ಘೋಷಿಸಬೇಕು. ಮೈಸೂರು ಜಿಲ್ಲೆ ಹಾಗೂ ನಂಜನಗೂಡು ತಾಲ್ಲೂಕನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ತಡೆಹಿಡಿದಿರುವ ವೃದ್ಧಾಪ್ಯ, ವಿಧವಾ ಹಾಗೂ ವಿಕಲಚೇತನರ ಎಲ್ಲಾ ಬಾಕಿ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ₹32,000 ವಾರ್ಷಿಕ ಆದಾಯ ಮಿತಿಯನ್ನು ಒಳಗೊಂಡ ಹೊಸ ಶರತ್ತುಗಳನ್ನು ತಕ್ಷಣವೇ ಹಿಂಪಡೆಯಬೇಕು. ಎಕರೆಗೆ ಕನಿಷ್ಠ ₹30,000 ಮಧ್ಯಂತರ ಬರ ಪರಿಹಾರ ಹಾಗೂ ಸಂಪೂರ್ಣ ಬೆಳೆ ನಷ್ಟಕ್ಕೆ ಎಕರೆಗೆ ₹50,000 ಪರಿಹಾರ ನೀಡಬೇಕು. ಫಸಲ್ ಬಿಮಾ ಯೋಜನೆಯಡಿ ಎಲ್ಲಾ ರೈತರಿಗೆ ಕೂಡಲೇ ವಿಮಾ ಪರಿಹಾರ ಬಿಡುಗಡೆ ಮಾಡಬೇಕು.
ರೈತರ ಎಲ್ಲಾ ಕೃಷಿ ಸಾಲಗಳನ್ನು ಮನ್ನಾ ಮಾಡಿ, ಬಲವಂತದ ವಸೂಲಾತಿಯನ್ನು ನಿಲ್ಲಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 250 ದಿನಗಳ ಉದ್ಯೋಗ ಹಾಗೂ ₹600 ದಿನಗೂಲಿ ನೀಡಬೇಕು. ಜಾನುವಾರುಗಳಿಗೆ ಉಚಿತ ಮೇವು, ಪಶು ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಈ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಗಳನ್ನು ಸಂಘಟಿಸಲಾಗುವುದು ಎಂದು ನಂಜನಗೂಡು ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷರಾದ ಬಸವರಾಜು, ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ್, ನಂಜನಗೂಡು ತಾಲೂಕು ಕಾರ್ಯದರ್ಶಿ ಬಸವಣ್ಣ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷೆ ಉಮಾದೇವಿ ಎಂ., ತಾಲ್ಲೂಕು ಸಮಿತಿ ಸದಸ್ಯರಾದ ಯೋಗೇಶ್, ಉಮೇಶ್, ರಮೇಶ್, ಭರತ್, ಅಳಗಂಚಿ ರಾಜು, ಮಹದೇವಸ್ವಾಮಿ, ಮಹದೇವ್, ಮಧು, ಮಹದೇವ್ ಗೌಡ, ಅನಿಲ್ ಕುಮಾರ್, ರಾಮ ನಾಯ್ಕ, ಮಂಜುನಾಥ್, ಸಿದ್ದರಾಜು, ಮಲ್ಲೇಶ್ ಸೇರಿದಂತೆ ನೂರಾರು ರೈತರು ಮತ್ತು ಕೃಷಿ ಕಾರ್ಮಿಕರು ಭಾಗವಹಿಸಿದ್ದರು.

