ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಪ್ರವಾಸಿಗರು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಅಕ್ಟೋಬರ್ 11ರಿಂದ 21 ರ ವರಗೆ ದಸರಾ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಈ ಬಾರಿಯ ಪ್ರದರ್ಶನಕ್ಕೆ ‘ಪ್ರಜಾಪ್ರಭುತ್ವದ ಹಬ್ಬ’ ಎಂಬ ವಿಶೇಷ ಪರಿಕಲ್ಪನೆ ನೀಡಲಾಗಿದ್ದು, ವಿವಿಧ ಬಗೆಯ ಹೂವುಗಳ ಅಲಂಕಾರ ಹಾಗೂ ಕಲಾತ್ಮಕ ಪುಷ್ಪ ವಿನ್ಯಾಸಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿವೆ.
ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಹೈಲೈಟ್ ಅಂದರೆ ಗಾಜಿನಮನೆಯೊಳಗೆ ನಳನಳಿಸುತ್ತಿರುವ ವಿಧಾನಸೌಧದ ಭವ್ಯ ಮಾದರಿ. ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಕೆಂಪು ಗುಲಾಬಿಗಳು, 4 ಸಾವಿರ ಸೇವಂತಿಗೆ ಹೂವುಗಳು ಹಾಗೂ 25 ಸಾವಿರ ಗ್ರೀನ್ ಫೋಲಿಯಜ್ಗಳನ್ನು ಬಳಸಿ ಈ ಅದ್ಭುತ ಕಲಾಕೃತಿಯನ್ನು ಸಿದ್ಧಪಡಿಸಲಾಗಿದೆ
ನಾಲ್ವಡಿ ಕೃಷ್ಣರಾಜ ಒಡೆಯರ್: ಫಲಪುಷ್ಪ ಪ್ರದರ್ಶನದ ವೇಳೆ ಸಾರ್ವಜನಿಕರಿಗೆ ಮೈಸೂರು ರಾಜ ಮನೆತನದ ಬಗ್ಗೆ ಅರಿವು ಮೂಡಿಸುವ ಉದ್ದೇಶ ದಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ವಿವಿಧ ಹೂವುಗಳನ್ನು ಬಳಸಿ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ.
ಪ್ರಜಾಪ್ರಭುತ್ವದ ಚಿತ್ರಣ: ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗದ ಮಾದರಿಗಳು ಜನಮನ ಸೂರೆಗೊಳ್ಳಲಿವೆ. ಬಣ್ಣ ಬಣ್ಣದ ಹೂವುಗಳನ್ನು ಬಳಸಿ ಮಾದರಿಯನ್ನು ಮಾಡಿರುವುದು ವಿಶೇಷ
ಮತದಾನದ ಪೆಟ್ಟಿಗೆ ಮತ್ತು ವಿದ್ಯುನ್ಮಾನ ಮತಯಂತ್ರಗಳು ಪ್ರಜಾಪ್ರಭುತ್ವದ ಹಬ್ಬ “ಮತದಾನ” ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಿವೆ. ನನ್ನ ಮತ – ನನ್ನ ಹಕ್ಕು ನನ್ನ ಹೊಣೆ ಘೋಷವಾಕ್ಯದೊಂದಿಗೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಮಹಿಳೆಯರು, ಹಿರಿಯ ನಾಗರೀಕರು ಸೇರಿದಂತೆ ಯುವಕರ ಭಾಗವಹಿಸುವಿಕೆ ಸಂದೇಶ ಸಾರುವ ಪುಷ್ಪ ಪ್ರತಿಕೃತಿಯು ಪ್ರದರ್ಶನದ ವೀಕ್ಷಕರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವಿಶೇಷವಾಗಿ ಹೂವಿನ ಅಲಂಕಾರದಲ್ಲಿ ಸಾಲುಮರದ ತಿಮ್ಮಕ್ಕ ಹಂಪಿಯ ರಥ, ಬೃಹತ್ ಕೇಕ್ ಶಿವಲಿಂಗ ಸೇರಿದಂತೆ ಇನ್ನಿತರ ಪ್ರದರ್ಶನಗಳು ಗಮನ ಸೆಳೆಯುತ್ತಿವೆ. ವಿವಿಧ ಬಣ್ಣಗಳ ಹೂವುಗಳಿಂದ ಸಿಂಗಾರಗೊಂಡಿರುವ ಉದ್ಯಾನವನವು ವೀಕ್ಷಕರಿಗೆ ಕಣ್ಮನ ಸೆಳೆಯುವ ಅನುಭವ ನೀಡುತ್ತಿದೆ. ಹೂವಿನ ಅಲಂಕಾರಗಳ ಜೊತೆಗೆ ಗುಲಾಬಿ ಹೂಗಳ ಉದ್ಯಾನ, ಬೋನ್ಸಾಯ್ ಗಿಡಗಳು, ತರಕಾರಿಗಳ ಕೆತ್ತನೆ ಹಾಗೂ ಗಾಜಿನ ಮನೆಯಲ್ಲಿನ ವಿಶೇಷ ಪುಷ್ಪ ವಿನ್ಯಾಸಗಳು ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿವೆ.
ಪ್ರಜಾಪ್ರಭುತ್ವದ ಮಹತ್ವವನ್ನು ಹೂವಿನ ಕಲಾಕೃತಿಗಳ ಮೂಲಕ ಜನರಿಗೆ ಪರಿಚಯಿಸುವ ಉದ್ದೇಶದಿಂದ ರೂಪಿಸಿರುವ ಈ ಪ್ರದರ್ಶನವು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕುಟುಂಬ ಸಮೇತರಾಗಿ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ವಿವಿಧ ಬಗೆಯ ಹೂವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

