ನಂಜನಗೂಡು: ದಲಿತ ಹೆಣ್ಣು ಮಗಳು ದಸರಾ ಉದ್ಘಾಟನೆಯನ್ನು ಮಾಡುವಂತಿಲ್ಲ ಎನ್ನುವ ಯತ್ನಾಳ್ ಹೇಳಿಕೆ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ನಂಜನಗೂಡಿನಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿಯ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿರುವ ಬಾನು ಮುಷ್ತಾಕ್ ರವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪ್ರತಾಪಸಿಂಹ ಮತ್ತು ಯತ್ನಾಳ್ ಅವರಂತಹ ಅರೆ ಹುಚ್ಚರು ನಾಡಹಬ್ಬದ ಅರಿವಿಲ್ಲದೆ ಮಾತನಾಡುತ್ತಿರುವುದು ಸರಿಯಲ್ಲ. ಅದು ಅಲ್ಲದೆ ಯತ್ನಾಳ್ ಅವರು ಸನಾತನ ಧರ್ಮವಲ್ಲದ ದಲಿತ ಹೆಣ್ಣು ಮಗಳಿಗೂ ದಸರಾ ಉದ್ಘಾಟನೆಗೆ ಅವಕಾಶವಿಲ್ಲ ಎಂದು ಹುಚ್ಚನಂತೆ ಮಾತನಾಡಿರುವುದು ಖಂಡನೀಯ.
ಮೈಸೂರು ದಸರಾ ಸಂಭ್ರಮವನ್ನು ಸಂಭ್ರಮಿಸಬೇಕಾದರೆ ದಲಿತರ ಪಾತ್ರವೇನು ಅವರ ಪರಿಶ್ರಮ ಎಷ್ಟಿರುತ್ತದೆ ಎನ್ನುವುದು ಯತ್ನಾಳ್ ಅವರಿಗೆ ಗೊತ್ತಿಲ್ಲ. ಒಂದು ವೇಳೆ ಇಂದಿನಿಂದಲೇ ಪೌರಕಾರ್ಮಿಕರು ತಮ್ಮ ಕರ್ತವ್ಯಕ್ಕೆ ದಸರಾ ಮುಗಿಯುವವರೆಗೆ ರಜಾ ಹಾಕಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದನ್ನು ಮಿಸ್ಟರ್ ಯತ್ನಾಳ್ ತಿಳಿದುಕೊಳ್ಳಬೇಕು. ದಸರಾ ಉದ್ಘಾಟನೆ ಮಾಡಲು ನಿನ್ನಂತವರಿಗೆ ಯೋಗ್ಯತೆ ಇಲ್ಲದಿರಬಹುದು ಆದರೆ, ಯತ್ನಾಳ್ ಮತ್ತು ಪ್ರತಾಪ ಸಿಂಹ ಅಂತ ಕೋಮುವಾದಿಗಳನ್ನು ಬಿಟ್ಟು ಈ ನಾಡಿನ ಎಲ್ಲಾ ಜಾತಿ ಧರ್ಮದವರಿಗೂ ಉದ್ಘಾಟನೆ ಮಾಡುವ ಹಕ್ಕಂತೂ ಇದ್ದೇ ಇರುತ್ತದೆ ಎಂದು ಕಿಡಿಕಾರಿದರು.
ಈ ಕೂಡಲೇ ರಾಜ್ಯ ಸರ್ಕಾರ ಇಂಥವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ರಾಜ್ಯ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ಈ ರೀತಿ ದಲಿತ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವ ಮುಂಚೆ ಯತ್ನಾಳ್ ಅವರು ಯೋಚನೆ ಮಾಡಿ ಮಾತನಾಡಬೇಕು. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

