ನಂಜನಗೂಡು: ರಾಜ್ಯಸಭಾ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸಗಣಿ-ಗಂಜಲದಿಂದ ಸ್ವಚ್ಛಗೊಳಿಸಿದ ಘಟನೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಕಾರ್ಯಕರ್ತರು ಸೋಮವಾರ ನಂಜನಗೂಡು ತಾಲ್ಲೂಕು ಆಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಉತ್ತರಖಂಡದ ಹಾಲ್ದಾನಿಯ ರಾಮಲೀಲಾ ಮೈದಾನದಲ್ಲಿ ಖರ್ಗೆ ಅವರು ರ್ಯಾಲಿ ಉದ್ದೇಶಿಸಿ ಮಾತನಾಡಿದ ಬಳಿಕ, ಸಂಘ ಪರಿವಾರದ ಕೆಲವು ಕಾರ್ಯಕರ್ತರು ಆ ಸ್ಥಳವನ್ನು ಸಗಣಿ ಹಾಗೂ ಹಸುವಿನ ಗಂಜಲದಿಂದ ತೊಳೆದು ಸ್ವಚ್ಛಗೊಳಿಸಿದ್ದರು. ಈ ಅಮಾನವೀಯ ಕೃತ್ಯವನ್ನು ಖಂಡಿಸಿ ನಂಜನಗೂಡಿನ ದಸಂಸ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಇದು ದಲಿತ ವಿರೋಧಿ ಹಾಗೂ ಪ್ರಜಾಪ್ರಭುತ್ವದ ವಿರೋಧಿ ಕೃತ್ಯ. ಸಂವಿಧಾನವನ್ನು ಗೌರವಿಸದ ಸಂಘ ಪರಿವಾರ ಮತ್ತು ಆರ್.ಎಸ್.ಎಸ್ ನಡೆ ಇದು. ಬಿಜೆಪಿ ಅಧಿಕಾರ ಇರುವವರೆಗೆ ಇಂತಹ ಪ್ರಕರಣಗಳು ಮುಂದುವರಿಯುತ್ತವೆ. ರಾಷ್ಟ್ರಪತಿಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಅವರು ಮಾತನಾಡಿ, ಒಬ್ಬ ದಲಿತ ಸಮುದಾಯದ ಹಿರಿಯ ರಾಷ್ಟ್ರೀಯ ನಾಯಕರಿಗೆ ಈ ರೀತಿ ಅಪಮಾನ ಮಾಡಿರುವುದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ. ದಲಿತರಿಗೆ ಇನ್ನೂ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಕೇಂದ್ರ ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು. ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು. ಅಂತಹ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜು, ಪಟ್ಟಣ ಸಂಚಾಲಕ ಲೋಕೇಶ್, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಆದರ್ಶ ಸೇರಿದಂತೆ ಪಾಪಣ್ಣ, ಮಹೇಶ್ ಕುಮಾರ್, ಪ್ರಕಾಶ್, ಸಿದ್ದರಾಜು, ರಾಹುಲ್, ಬದನವಾಳು ಸೋಮಣ್ಣ ಮೊದಲಾದವರು ಭಾಗವಹಿಸಿದ್ದರು.

