ಮೈಸೂರು: ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಮಾಜಿ ಸಿಎಂ ವಿರುದ್ಧ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ.ಹೆಚ್.ಸಿ ಮಹದೇವಪ್ಪಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ. ಸುತ್ತೂರಿನಲ್ಲಿ ಮಾಧ್ಯಮಗೋಷ್ಠಿ ಮತ್ತು ದಲಿತ ಸಮುದಾಯದ ಮುಖಂಡರ ಸಭೆ ನಡೆಸಿದ ದಲಿತ ಸಂಘರ್ಷ ಸಮಿತಿ.
ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ವರುಣ ಕ್ಷೇತ್ರವು ಪ್ರಬಲ ಕ್ಷೇತ್ರವಾಗಿದೆ. ಎರಡು ಬಾರಿ ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ಕೊಟ್ಟಿರುವ ವರುಣ ಕ್ಷೇತ್ರ. ಮೊದಲ ಪಟ್ಟಿಯಲ್ಲಿಯೇ ಡಾ.ಹೆಚ್ .ಸಿ ಮಹದೇವಪ್ಪ ರವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ನಂತರ ಡಾ. ಯತೀಂದ್ರ ರವರಿಗೆ ನೀಡಬಹುದಿತ್ತು. ಎರಡನೇ ಹಂತದಲ್ಲಿ ಡಾ.ಹೆಚ್.ಸಿ ಮಹದೇವಪ್ಪ ರವರಿಗೆ ಸಚಿವ ಸ್ಥಾನ ನೀಡಲೇಬೇಕು. ಸಚಿವ ಸ್ಥಾನ ಮತ್ತೆ ಕೈ ತಪ್ಪಿದರೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಮಹದೇವಪ್ಪ ರವರಿಗೆ ಸಚಿವ ಸ್ಥಾನ ಕೈ ತಪ್ಪಲು ಸಿದ್ದರಾಮಯ್ಯರವರೇ ಕಾರಣ.

ಸಿದ್ದರಾಮಯ್ಯರವರು ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಬಹುದಿತ್ತು. ಸಿದ್ದರಾಮಯ್ಯರವರು ಮಹದೇವಪ್ಪ ರವರ ಹೆಸರನ್ನು ಮುಂಚೂಣಿಯಲ್ಲಿ ತಂದಿಲ್ಲ. ಅಂದು ಕಾಂಗ್ರೆಸ್ ಶ್ರೀನಿವಾಸ್ ಪ್ರಸಾದ್ ಅವರನ್ನು ಮುಕ್ತಾಯ ಮಾಡಿತ್ತು, ಇಂದು ಮಹದೇವಪ್ಪ ರವರನ್ನು ಮುಕ್ತಾಯ ಮಾಡಲು ಹೊರಟಿದೆ ಇದನ್ನು ನಾವು ಸಹಿಸುವುದಿಲ್ಲ.

ಸಿದ್ದರಾಮಯ್ಯರವರು ತಮ್ಮ ಪುತ್ರರಿಗೆ ಸಚಿವ ಸ್ಥಾನವನ್ನು ಕೊಡಿಸಿದ್ದಾರೆ ಆದರೆ ಮಹದೇವಪ್ಪ ರವರು ನೆನಪಾಗಿಲ್ಲ. ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ರವರಿಗೆ ರಾಜೀನಾಮೆ ಕೊಡಿಸಿದಾಗ ಸಚಿವ ಸ್ಥಾನ ಸಿಗಲಿದೆ. ಸಿದ್ದರಾಮಯ್ಯರವರು ನಾನು ದಲಿತ ಎಂದು ಹೇಳುತ್ತಾರೆ. ಇದು ಬೂಟಾಟಿಕೆ ಮಾತಾಗಬಾರದು, ದಲಿತರಿಗೆ ಕಣ್ಣೊರೆಸುವ ತಂತ್ರ ಬಿಡಬೇಕು. ಮುಂದಿನ ದಿನಗಳಲ್ಲಿ ನಿಮ್ಮನ್ನು ಕೈ ಬಿಡಬೇಕಾಗುತ್ತದೆ.

ಮಹದೇವಪ್ಪ ರವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದರೆ ದಲಿತ ಸಮುದಾಯ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯರವರಿಗೆ ತಕ್ಕ ಪಾಠ ಕಲಿಸುತ್ತೇವೆ. ಮಹದೇವಪ್ಪ ರವರು ಏನೇ ನಿರ್ಧಾರ ತೆಗೆದುಕೊಂಡರು ನಾವು ಬದ್ಧರಾಗಿರುತ್ತೇವೆ. ಇನ್ನು ಮುಂದೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರವರಿಗೆ ವರುಣಾದಲ್ಲಿ ಉಳಿಗಾಲವಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಎಚ್ಚರಿಕೆ ನೀಡಿದರು.