ನಂಜನಗೂಡು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ನಂಜನಗೂಡಿನ ದಕ್ಷಿಣಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಬೃಹತ್ ರಂಗೋಲಿ ಬಿಡಿಸುವ ಮೂಲಕ ಹಾಗೂ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ದೇವಾಲಯದ ಆವರಣದಲ್ಲಿ ಆಕರ್ಷಕ ರಂಗೋಲಿ ಬಿಡಿಸಿ ಭಕ್ತರು, ವ್ಯಾಪಾರಸ್ಥರು ಹಾಗೂ ಸ್ಥಳೀಯ ಸಾರ್ವಜನಿಕರ ಗಮನ ಸೆಳೆಯಲಾಯಿತು. ಮತದಾರರ ಪಟ್ಟಿಯ ವಿಶೇಷ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಲಾಯಿತು.

ಈ ವೇಳೆ ತಾಲ್ಲೂಕು ಪಂಚಾಯಿತಿಯ ಲೆಕ್ಕಾಧಿಕಾರಿ ಸಿದ್ದರಾಜು ಎಂ. ಮಾತನಾಡಿ, ಯಾವುದೇ ಅರ್ಹ ಮತದಾರ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು. ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ತಿದ್ದುಪಡಿ ಅಗತ್ಯವಿದ್ದಲ್ಲಿ ತಡಮಾಡದೆ ತಮ್ಮ ಮತಗಟ್ಟೆ ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸುವಂತೆ ತಿಳಿಸಿದರು.

ತಾಲ್ಲೂಕು ಯೋಜನಾ ಅಧಿಕಾರಿ ಬಸವನಗೌಡ ಗಂಗಪ್ಪಳವರ ಮಾತನಾಡಿ, ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶದಿಂದ ಎಸ್‌ಐಆರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಿದ್ದು, ನಿಗದಿತ ನಮೂನೆ ಪಡೆದು ಹೊಸದಾಗಿ ಹೆಸರು ಸೇರ್ಪಡೆ, ಹೆಸರು ತೆಗೆಯುವುದು ಹಾಗೂ ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಸಹಾಯಕ ನಿರ್ದೇಶಕ ರಘುನಾಥ್ ಕೆ.ಎಂ. ಮಾತನಾಡಿ, 18 ವರ್ಷ ಪೂರ್ಣಗೊಂಡ ಅರ್ಹ ಯುವ ಮತದಾರರು ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ. ಅರ್ಹ ಯುವಕರು ಸೇರಿದಂತೆ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಸ್ವೀಪ್ ಸಮಿತಿಯ ದಿನೇಶ್, ಕಾವ್ಯ, ಎನ್‌ಆರ್‌ಎಲ್‌ಎಂ ಯೋಜನೆಯ ಟಿಪಿಎಂ ದಿವ್ಯಾ, ಕ್ಲಸ್ಟರ್ ಸೂಪರ್‌ವೈಸರ್‌ಗಳಾದ ಹರೀಶ್, ಲತಾ, ವಿಜಯಲಕ್ಷ್ಮಿ ಸೇರಿದಂತೆ ಗ್ರಾಮ ಪಂಚಾಯಿತಿಗಳ ಎಂಬಿಕೆ ಹಾಗೂ ಎಲ್‌ಸಿಆರ್‌ಪಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಸ್ವೀಪ್ ಸಮಿತಿ ವತಿಯಿಂದ ದೇವಾಲಯದ ಆವರಣದಲ್ಲಿ ಅಳವಡಿಸಲಾಗಿದ್ದ ಎಸ್‌ಐಆರ್ ಸೆಲ್ಫಿ ಸ್ಟ್ಯಾಂಡ್ ಭಕ್ತರ ಗಮನ ಸೆಳೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸೆಲ್ಫಿಗೆ ಪೋಸ್ ನೀಡಿ ಸಂಭ್ರಮಿಸಿದರು. ಇದೇ ವೇಳೆ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆದು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಲು ಆಸಕ್ತಿ ತೋರಿದರು.

ಜಾಗೃತಿ ಜಾಥಾ ವೇಳೆ ದೇವಾಲಯದ ಆವರಣದಲ್ಲಿದ್ದ ಆಟೋ ನಿಲ್ದಾಣದಲ್ಲಿಯೂ ಎಸ್‌ಐಆರ್ ಕುರಿತು ಅರಿವು ಮೂಡಿಸಲಾಯಿತು. ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಆಟೋ ಚಾಲಕರು ಸ್ವಯಂಪ್ರೇರಿತರಾಗಿ ಎಸ್‌ಐಆರ್ ಜಾಗೃತಿ ಪೋಸ್ಟರ್‌ಗಳನ್ನು ಪಡೆದುಕೊಂಡು ತಮ್ಮ ಆಟೋಗಳ ಹಿಂಭಾಗದಲ್ಲಿ ಅಂಟಿಸಿಕೊಂಡರು.