ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದಲ್ಲಿ ಬೇರೊಬ್ಬರ ಜಮೀನಿನಲ್ಲಿ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಗ್ರಾಮ ಪಂಚಾಯಿತಿ ಫ್ಲೋರ್ ಮಿಲ್ ನಿರ್ಮಾಣಕ್ಕೆ ಪರವಾನಗಿ ನೀಡಿದ್ದಾರೆ ಎಂದು ಮಲ್ಲೂಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೋಹಿಣಿ ಪುಟ್ಟರಾಜು ಆರೋಪಿಸಿದ್ದಾರೆ.

ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಿರಗುಂದ ಗ್ರಾಮದ 407/1 ಸರ್ವೆ ನಂಬರ್ ನಲ್ಲಿ 1.18 ಗುಂಟೆ ಜಮೀನಿದ್ದು, ಇದರಲ್ಲಿ ಉಮಾ ಎಂಬ ಮಹಿಳೆಗೆ ಸೇರಿದ 2 ಗುಂಟೆ ಸ್ವಂತ ಜಮೀನು ಇರುತ್ತದೆ. ಉಮಾ ಅವರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಬೇರೊಬ್ಬರು ಫ್ಲೋರ್ ಮಿಲ್ ಹಾಗೂ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ.

ಕಂದಾಯ ಇಲಾಖೆಗೆ ಸೇರಿದ್ದರೂ ಕೂಡ ಗ್ರಾಮ ಪಂಚಾಯಿತಿ ವಿದ್ಯುತ್ ಸಂಪರ್ಕ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಇದು ಕಾನೂನು ಬಾಹಿರವಾಗಿದೆ. ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಬೇಕಾದರೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಅನುಮತಿಯನ್ನು ತೆಗೆದುಕೊಳ್ಳಬೇಕು. ಆದರೆ, ಗ್ರಾಮ ಪಂಚಾಯಿತಿಯವರು ಹೇಗೆ ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಯಾವುದೇ ದಾಖಲಾತಿಗಳನ್ನು ಪರಿಶೀಲಿಸದೆ ಚೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಇದು ಅಕ್ರಮವಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯುತ್ ಸಂಪರ್ಕವನ್ನು ರದ್ದು ಮಾಡಬೇಕು. ಅಕ್ರಮವಾಗಿ ಪರವನಿಗೆ ನೀಡಿರುವ ಗ್ರಾ.ಪಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾ.ಪಂ ಕಛೇರಿ ಮತ್ತು ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ನೊಂದ ಮಹಿಳೆ ಉಮಾ ಮಾತನಾಡಿ, ನಾನು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನಮ್ಮ ಜಾಗದಲ್ಲಿ ಬೇರೊಬ್ಬರು ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಇದು ನಮ್ಮ ಮಾವ ಅವರಿಗೆ ಸೇರಿದ ಜಾಗವಾಗಿದ್ದು, ಇದು ನಮ್ಮ ಭಾಗಕ್ಕೆ ಬರುತ್ತದೆ ಆದ್ದರಿಂದ ನಮಗೆ ಸೇರಿದ ಜಾಗವನ್ನು ಬಿಡಿಸಿಕೊಡಿ ಎಂದು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೋಹಿಣಿ ಪುಟ್ಟರಾಜು, ನೊಂದ ಮಹಿಳೆ ಉಮಾ ಹಾಜರಿದ್ದರು.