ನಂಜನಗೂಡು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಲಲಿತ ಆಡಳಿತ ವ್ಯವಸ್ಥೆಯನ್ನು ರೂಪಿಸಿ, ದೇಶದ ಜನರ ಬದುಕಿಗೆ ದಾರಿಯಾಗಬೇಕಾದರೆ ಭಾರತ ದೇಶದ ಸಂವಿಧಾನವೇ ಪ್ರಮುಖ ಕಾರಣ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಬಣ್ಣಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಸಂವಿಧಾನ ಪೀಠಿಕೆಯನ್ನು ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಭಾರತ ದೇಶವನ್ನು ಸತತ 500 ವರ್ಷಗಳ ಕಾಲ ಪರಕಿಯರು ರಾಜ್ಯಭಾರ ನಡೆಸಿ, ದೇಶದ ಸಂಪತ್ತನ್ನು ದೋಚಿದರು.
ಅತಿ ಹೆಚ್ಚು ಆಡಳಿತ ನಡೆಸಿದ ಬ್ರಿಟಿಷರು ದೌರ್ಜನ್ಯ ದಬ್ಬಾಳಿಕೆಗಳನ್ನು ನಡೆಸುತ್ತಿದ್ದರು. ಎಷ್ಟು ವರ್ಷಗಳ ಕಾಲ ಗುಲಾಮಗಿರಿಯಿಂದ ಬದುಕಬೇಕು ಎಂದು ದೇಶದ ಹಿರಿಯರು ಸ್ವಾತಂತ್ರ ಹೋರಾಟ ನಡೆಸಿದರು. ಸ್ವಾತಂತ್ರ್ಯ ಲಭಿಸಿದ ಬಳಿಕ ದೇಶಕ್ಕೆ ಪ್ರಮುಖವಾಗಿ ಸಂವಿಧಾನದ ಅವಶ್ಯಕತೆ ಇತ್ತು. ಅಂತಹ ಸಂದರ್ಭದಲ್ಲಿ ಡಾ ಬಿಆರ್ ಅಂಬೇಡ್ಕರ್ ಅತಿ ಹೆಚ್ಚು ವಿದ್ಯಾಭ್ಯಾಸವನ್ನು ನಡೆಸಿ ಅಪಾರವಾದ ಜ್ಞಾನವನ್ನು ಪಡೆದುಕೊಂಡಿದ್ದರು.
ದೇಶದಲ್ಲಿದ್ದ ಹಿಂದುಳಿದ ಜನರ ಬದುಕನ್ನು ಗಾಢವಾಗಿ ಚಿಂತಿಸಿ ಪ್ರತಿಯೊಬ್ಬ ಜೀವಿಗೂ ಉತ್ತಮ ಬದುಕು ರೂಪಿಸುವ ಸಲುವಾಗಿ ಭಾರತ ದೇಶಕ್ಕೆ ಪ್ರಬುದ್ಧವಾದ ಸಂವಿಧಾನವನ್ನು ನೀಡಿದರು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಕೇವಲ ಶೇಕಡ 10 ರಷ್ಟು ಜನ ಮಾತ್ರ ವಿದ್ಯಾವಂತರಿದ್ದರು. ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಕಲ್ಪಿಸಿ, ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಕಲ್ಪಿಸಿ ಕೊಡುವಲ್ಲಿ ಮತ್ತು ಉತ್ತಮ ಜೀವನ ನಿರ್ವಹಣೆಗೆ ದಾರಿ ಮಾಡಿಕೊಡುವಲ್ಲಿ ಸಂವಿಧಾನದ ಪಾತ್ರ ಬಹಳ ಪ್ರಮುಖವಾದದ್ದು.
ಏನಾದರೂ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸದಿದ್ದರೆ ಇಂದು ದೇಶದ ಸ್ಥಿತಿ ಅದೋಗತಿಗೆ ತಲುಪುತ್ತಿತ್ತು ಸಾಕಷ್ಟು ಇಂಗ್ಲೀಷ್ ನಾಯಕರು ಭಾರತ ದೇಶದಲ್ಲಿದ್ದ ಅಸಮಾನತೆಯನ್ನು ನೋಡಿ ಗೇಲಿ ಮಾಡುತ್ತಿದ್ದರು. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಸೇರಿದಂತೆ ಸಾಕಷ್ಟು ದೇಶಗಳ ನಾಯಕರು ನಮ್ಮ ಭಾರತ ದೇಶದ ಸಂವಿಧಾನವನ್ನು ನೋಡಿ ಒಂದು ಸಾವಿರ ವರ್ಷಗಳ ತನಕ ಯಾವುದೇ ಗೊಂದಲ ಇಲ್ಲದ ರೀತಿಯಲ್ಲಿ ಉತ್ತಮ ಜೀವನ ನಿರ್ವಹಣೆ ಮಾಡಬಹುದು ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇಂತಹ ಪ್ರಭುದ್ಧ ಸಂವಿಧಾನವನ್ನು ಪಡೆದ ಭಾರತದ ಪ್ರಜೆಗಳಾದ ನಾವೇ ಧನ್ಯರು ಎಂದರು.
ಮುಖ್ಯ ಭಾಷಣಕಾರರಾದ ಪ್ರೊ. ಆನಂದ ಮಾತನಾಡಿ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ದೇಶದ ನಾಲ್ಕು ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸಂವಿಧಾನದ ಅಡಿಯಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳು ನಡೆಯುತ್ತಿವೆ. ತಾಲ್ಲೂಕಿನ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಮಹತ್ವ ಅರಿಯಬೇಕು ಎಂದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜೂನಿಯರ್ ಕಾಲೇಜು ಮೈದಾನದಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಆರ್ಪಿ ರಸ್ತೆಯ ಮೂಲಕ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಜಾಥಾ ನಡೆಸಿ, ಅಂಬೇಡ್ಕರ್ ವೃತ್ತದ ವರೆಗೆ ತೆರಳಿ, ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ತಹಸಿಲ್ದಾರ್ ಶಿವಕುಮಾರ್ ಕಾಸನೂರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದಲಿಂಗು, ವ್ಯವಸ್ಥಾಪಕ ಶಿವನಾಗು, ವಸತಿ ನಿಲಯಗಳ ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಂದರ್ಭದಲ್ಲಿ ಹಾಜರಿದ್ದರು.

