ನಂಜನಗೂಡು: ಚಲಿಸುತ್ತಿರುವ ಸಾರಿಗೆ ಬಸ್ಸಿನಲ್ಲಿ ಬರ್ತಡೇ ಆಚರಣೆ ನಡೆದಿದೆ. ಕಂಡಕ್ಟರ್ ನ ಹುಟ್ಟುಹಬ್ಬವನ್ನು ಮಹಿಳಾ ಪ್ರಯಾಣಿಕರು ಬಸ್ ನ ಇಂಜಿನ್ ಮೇಲೆ ಕೇಕ್ ಇಟ್ಟು ಕತ್ತರಿಸಿ ನಿರ್ವಾಹಕನ ಜನುಮ ದಿನವನ್ನ ಆಚರಿಸಿದ್ದಾರೆ.

ಚಾಲಕನ ಗಮನ ಇತ್ತ ಸೆಳೆದಿದೆ. ನಿರ್ವಾಹಕ ಮತ್ತು ಚಾಲಕನ ಹುಚ್ಚಾಟಕ್ಕೆ ಪ್ರಯಾಣಿಕರು ಬೆಚ್ಚಿಬಿದ್ದು ಸರಿಯಾಗಿ ಓಡಿಸಪ್ಪ ಎಂದು ಕೂಗಾಡಿದ್ದಾರೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ,ಕಣೇನೂರು ಮಾರ್ಗವಾಗಿ ಹೆಚ್.ಡಿ ಕೋಟೆಯ ಕಾರಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಇದಾಗಿದೆ ನೊಂದಣಿ ಸಂಖ್ಯೆ KA.09 F 5074 ನಲ್ಲಿ ಬರ್ತಡೇ ಆಚರಿಸಲಾಗಿದೆ.

ದಿನನಿತ್ಯ ಸಂಜೆ 7:30ರ ವೇಳೆಗೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಬಸ್ ನಿಲ್ದಾಣದಿಂದ ಬಿಟ್ಟು ಕಾರಾಪುರಕ್ಕೆ ಈ ಬಸ್ ತೆರಳುತ್ತದೆ. ನಿನ್ನೆ ರಾತ್ರಿ ಎಂಟು ಗಂಟೆಯ ವೇಳೆಯಲ್ಲಿ ಕಣೇನೂರು ಗ್ರಾಮದ ಬಳಿ ಚಲಿಸುತ್ತಿದ್ದ ಬಸ್ಸಿನಲ್ಲಿ ಕೇಕ್ ಕತ್ತರಿಸಿ ಪ್ರಯಾಣಿಕರ ಕೆಂಗಣ್ಣಿಗೆ ಚಾಲಕ ಮತ್ತು ನಿರ್ವಾಹಕ ಗುರಿಯಾಗಿದ್ದಾರೆ.

ಬರ್ತಡೇ ಆಚರಿಸಲು ಈ ಜನರಿಗೆ ಚಲಿಸುವ ಬಸ್ ಬೇಕಿತ್ತಾ. ಹಲವು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿ ಈ ಇಬ್ಬರದ್ದು. ಆದ್ರೆ ಇವರೇ ಬಸ್ ನಲ್ಲಿ ಬೆರಳೆಣಿಕೆಯ ಫ್ಯಾನ್ ಗಳ ಹುಡುಗಾಟಕ್ಕೆ ಸ್ಪಂದಿಸಿದ್ದಾರೆ. ಈ ಸಂಭ್ರಮದಲ್ಲಿ ಅನಾಹುತ ನಡೆದರೆ ಯಾರು ಹೊಣೆ ? ಸಾರಿಗೆ ಸಚಿವರೇ ಇಂತಹ ಸಿಬ್ಬಂದಿಗಳಿಗೆ ನಿಮ್ಮ ಸಲಹೆ ಏನು…? ನಿರ್ವಾಹಕ ಮತ್ತು ಚಾಲಕನ ವಿರುದ್ಧ ಕ್ರಮ ಯಾವಾಗ ?.