ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 50:50 ಅನುಪಾತದ ನಿವೇಶನ ಹಂಚಿಕೆ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಸಿಬಿಐಗೆ ವಹಿಸಲ್ಲ. ಕಾನೂನು ಬಾಹಿರವಾಗಿ ನಿವೇಶನ ಹಂಚಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮುಡಾ ಹಗರಣದ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಶೇ.50:50 ಅನುಪಾತನವನ್ನು ರದ್ದುಪಡಿಸಿ ಇಬ್ಬರು ಐಎಎಸ್ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ವರದಿ ಬಂದ ನಂತರ ಕ್ರಮ ವಹಿಸುತ್ತೇವೆ. ವಿಪಕ್ಷ ನಾಯಕರು ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿರುವ ಪ್ರಶ್ನೆಗೆ ಗರಂ ಆದ ಮುಖ್ಯಮಂತ್ರಿಗಳು, ಯಾಕೆ ನಮ್ಮ ಪೊಲೀಸರು ಸಮರ್ಥರಿಲ್ಲವೇ ಎಂದು ಪ್ರಶ್ನಿಸಿದರು.

ಹಿಂದೆ ಮುಖ್ಯಮಂತ್ರಿಯಾಗಿ ಅನೇಕ ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಬಿಜೆಪಿಯವರು ಯಾವುದಾದರೂ ಒಂದೂ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರಾ? ಸಿಬಿಐ ಅನ್ನು ಚೋರ್ ಬಚಾವ್ ಸಂಸ್ಥೆ ಅನ್ನುತ್ತಿದ್ದರು. ಈಗ ಸಿಬಿಐಗೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ತನಿಖೆ ಮಾಡಲು ನಮ್ಮ ಪೊಲೀಸರು ಸಮರ್ಥರಿದ್ದಾರೆ ಎಂದರು.

ನನ್ನ ಪತ್ನಿ ಮುಡಾದಲ್ಲಿ ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ. ಆದರೆ ಬಿಜೆಪಿ ನಾಯಕರು ವಿವಾದ ಮಾಡಲೆಂದೇ ಆರೋಪಗಳನ್ನು ಮಾಡುತ್ತಿದ್ದಾರೆ. ಕೆಸರೆಯಲ್ಲಿದ್ದ ಜಮೀನು ವಶಪಡಿಸಿಕೊಂಡ ಬಳಿಕ ಪರಿಹಾರ ಕೊಡುವಂತೆ ಮುಡಾಗೆ ನನ್ನ ಪತ್ನಿ ಪತ್ರ ಬರೆದಿದ್ದರು. ಪ್ರಾಧಿಕಾರದ ಸಭೆಯಲ್ಲಿ ತಪ್ಪೊಪ್ಪಿಕೊಂಡು ವಿಜಯನಗರದಲ್ಲಿ ನಿವೇಶನ ಕೊಟ್ಟಿದ್ದಾರೆ. ನಾವು ವಿಜಯನಗರದಲ್ಲಿ ನಿವೇಶನ ಕೊಡುವಂತೆ ಕೇಳಿರಲಿಲ್ಲ ಎಂದರು.

ನಿಮ್ಮ ಜಮೀನನ್ನು ವಶಪಡಿಸಿಕೊಂಡಿದ್ದರೆ ಪರಿಹಾರ ಕೇಳುತ್ತಿರಲಿಲ್ಲವೇ? ಎಂದು ಪತ್ರಕರ್ತರನ್ನು ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಮುಡಾದಿಂದ ನಿವೇಶನ ಪಡೆದಿರುವುದರಲ್ಲಿ ಯಾವುದೇ ತೊಡಕಿಲ್ಲ ಎಂದು ತಿಳಿಸಿದರು.

ಮುಡಾದಲ್ಲಿ ಜನಪ್ರತಿನಿಧಿಗಳ ಬೋರ್ಡ್ ರದ್ದು ಮಾಡುವ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ರಾಮಣ್ಣ ಎಂಬುವರು ಮುಡಾ ಸದಸ್ಯರಿದ್ದಾಗ ಪ್ರಾಧಿಕಾರದಲ್ಲಿ ಯಾರು ಸದಸ್ಯರಾಗಬೇಕು ಎಂಬುದು ಚರ್ಚೆಗೆ ಬಂದಿತ್ತು. ಮುಂದೆ ನೋಡೋಣ ಎಂದು ಹೇಳಿದರು.