ಮೈಸೂರು: ಮೈಸೂರು ನಗರದಲ್ಲಿರುವ ಚರ್ಚ್ ಗಳು ಸೇರಿದಂತೆ ಕ್ರೈಸ್ತಬಾಂಧವರ ಮನೆಗಳಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಗಳವಾರ ರಾತ್ರಿಯಿಂದಲೇ ಮನೆ, ಚರ್ಚ್ ಗಳು ದೀಪಾಲಂಕಾರ, ತೂಗುಬಿಟ್ಟ ನಕ್ಷತ್ರಗಳು, ಕ್ರಿಸ್ ಮಸ್ ಟ್ರೀ ಗಳೊಂದಿಗೆ ಆಕರ್ಷಿಸುತ್ತಿದ್ದು, ಜತೆಗೆ ವಿವಿಧ ಕಾರ್ಯಕ್ರಮಗಳು ರಂಗ ತಂದಿವೆ. ಚರ್ಚ್ ಆವರಣದಲ್ಲಿ ಏಸುಕ್ರಿಸ್ತನನ್ನು ವಿಶೇಷವಾಗಿ ಸಿಂಗರಿಸಿ, ಏಸು ಜನಿಸಿದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಮರುಸೃಷ್ಟಿ ಮಾಡಲಾಗಿದೆ.
ನಗರದ ಪ್ರಸಿದ್ಧ ಸಂತಫಿಲೋಮಿನಾ ಚರ್ಚ್, ಬೆಂಗಳೂರು ನೀಲಗಿರಿ ರಸ್ತೆಯ ವೆಸ್ಲಿ ಕ್ಯಾಥೆಡ್ರಲ್, ಸೇಂಟ್ ಬಾರ್ಥಲೋಮಿಯಸ್ ಕ್ಯಾಥೆಡ್ರಲ್, ವಿಜಯನಗರದ 4ನೇ ಹಂತದ ಇನ್ಫ್ಯಾಂಟ್ ಜೀಸಸ್ ಚರ್ಚ್, ಹಾರ್ಡ್ವಿಕ್ ಚರ್ಚ್ ಸೇರಿದಂತೆ ನಗರದಲ್ಲಿರುವ ಎಲ್ಲ ಚರ್ಚ್ ಗಳಲ್ಲಿ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಲಾಗುತ್ತಿದೆ. ಬೆತ್ಲೆಹೆಮ್, ಜೆರುಸಲೇಮ್ ನಗರಗಳನ್ನು ಬಿಂಬಿಸುವ ಗೋದಲಿ ನಿರ್ಮಾಣದಿಂದ ಸಂತ ಫಿಲೋಮಿನಾ ಚರ್ಚ್ ಗಮನಸೆಳೆಯುತ್ತಿದೆ.
ಇಲ್ಲಿ ಕಲಾವಿದರು ರಂಗೋಲಿಯಲ್ಲಿ ಸೃಷ್ಟಿಸಿದ ಬೃಹತ್ ಏಸುಕ್ರಿಸ್ತನ ಚಿತ್ರ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ಪುನೀತ್ ಕಲಾವಿದ ಬಳಗ ಹಾಗೂ ಖ್ಯಾತ ರಂಗೋಲಿ ಕಲಾವಿದೆ ಸಿ.ಲಕ್ಷ್ಮಿ ಮತ್ತು ಕೆಥಡ್ರೆಲ್ ಪ್ಯಾರೀಸ್ನ ಉಸ್ತುವಾರಿ ಸ್ಟೇನಿ ಡಿ.ಅಲ್ಮೇಡಾ ಅವರ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಈ ಚಿತ್ರ ಸುಮಾರು 4500ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ ಇದನ್ನು ಡಿ.23ರ ಸಂಜೆ ಆರಂಭಿಸಿ 24ರ ಬೆಳಗ್ಗೆ ಪೂರ್ಣಗೊಳಿಸಿರುವುದು ವಿಶೇಷ. ವಿವಿಧ ಬಣ್ಣಗಳಲ್ಲಿ ರಚಿಸಿರುವ ಯೇಸುವಿನ ಈ ಚಿತ್ರ ಸಂತ ಫಿಲೋಮಿನಾ ಚರ್ಚ್ನ ಪ್ರಮುಖ ಆಕರ್ಷಣೆಯಾಗಿದೆ.

ಮಂಗಳವಾರ ಮಧ್ಯರಾತ್ರಿಯಿಂದಲೇ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ್ದು, ಇದೀಗ ಚರ್ಚ್ಗಳಿಗೆ ಆಗಮಿಸುವ ಜನರು ಯೇಸುವನ್ನು ಪ್ರಾರ್ಥಿಸಿ, ಪರಸ್ಪರ ಕ್ರಿಸ್ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಫಿಲೋಮಿನಾ ಚರ್ಚ್ ನಲ್ಲಿ ಮಂಗಳವಾರ ರಾತ್ರಿ 10.30ಕ್ಕೆ ಕ್ರಿಸ್ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು 11.30ರಿಂದ ಜಾಗರಣೆ ಕ್ರಿಸ್ಮಸ್ ಬಲಿಪೂಜೆ ನಡೆಯಿತು. ಸರಿಯಾಗಿ 12 ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮೈಸೂರು ಧರ್ಮಕ್ಷೇತ್ರ ಆಡಳಿತಾಧಿಕಾರಿ ಬರ್ನಾರ್ಡ್ ಮೋರಸ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಡಿ.25ರಂದು ಬೆಳಗ್ಗೆ 5ರಿಂದ 9ರವರೆಗೆ ಪ್ರಮುಖ ಪ್ರಾರ್ಥನೆ ತಮಿಳು ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಡೆಯಿತು. ಬಳಿಕ ಸಾರ್ವಜನಿಕರಿಗೆ ಚರ್ಚ್ ಪ್ರವೇಶ ನೀಡಲಾಯಿತು. ಮತ್ತೆ ಸಂಜೆ 6 ಗಂಟೆಗೆ ಪೂಜೆ ನಡೆಯಲಿದೆ. ಪ್ರೊಟೆಸ್ಟೆಂಟ್ ಚರ್ಚ್ಗಳಲ್ಲಿ ಡಿ.25ರಂದು ಬೆಳಗ್ಗೆ 8ರಿಂದ ಪೂಜಾ ಕಾರ್ಯಕ್ರಮ ಆರಂಭವಾಗಿವೆ. ಚರ್ಚ್ ಗಳಿಗೆ ಕ್ರೈಸ್ತರು ಮಾತ್ರವಲ್ಲದೆ ಇತರೆ ಧರ್ಮದವರು ಭೇಟಿ ನೀಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಒಟ್ಟಾರೆ ಇಡೀ ನಗರದಲ್ಲಿ ಕ್ರಿಸ್ ಮಸ್ ಸಂಭ್ರಮ ಮನೆಮಾಡಿದೆ.

