ನಂಜನಗೂಡು : ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡಿನಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ರಥೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು ಭಕ್ತಿಯಿಂದ ರಥವನ್ನೆಳೆದು ಪೂಜೆ ಸಲ್ಲಿಸಿದರು.

ಜಾತ್ರೆಯ ಪ್ರಯುಕ್ತ ಬೆಳಗ್ಗೆ 4ರಿಂದಲೇ ಕಪಿಲಾ ನದಿ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಅರ್ಚಕರು ಶ್ರೀ ಗಣಪತಿ, ಶ್ರೀ ಚಂಡಿಕೇಶ್ವರ, ಪಾರ್ವತಿ ಹಾಗೂ ಶ್ರೀ ನಂಜುಂಡೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರತಂದು ಮೊಗಸಾಲೆಯಲ್ಲಿರಿಸಿ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿ ರಥದ ಸುತ್ತ ಪ್ರದಕ್ಷಿಣೆ ಹಾಕಿ 9:00ರಿಂದ 9:30 ಗಂಟೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಸರ್ವಾಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

 

ಈ ಸಂದರ್ಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ರಥದ ಚಕ್ರಗಳಿಗೆ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು. ಪಾರ್ವತಿ ಸಮೇತ ಶ್ರೀ ನಂಜುಂಡಸ್ವಾಮಿ ಒಂದು ರಥದಲ್ಲಿ ಆಸೀನರಾಗಿದ್ದರೆ, ಗಣಪತಿ ಹಾಗೂ ಚಂಡಿಕೇಶ್ವರ ಸ್ವಾಮಿಯನ್ನು ಹೊತ್ತ ಪ್ರತ್ಯೇಕ ರಥಗಳು ರಥಬೀದಿಯಲ್ಲಿ ಸಂಚರಿಸಿದವು. ವಿವಿಧ ಬಗೆಯ ಪುಷ್ಪಗಳು ಹಾಗೂ ಬಣ್ಣ ಬಣ್ಣದ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ಮೂರೂ ರಥಗಳು ನೋಡುಗರ ಕಣ್ಮನ ಸೆಳೆದವು. ಜಾತ್ರೆ ಅಂಗವಾಗಿ ಮಜ್ಜಿಗೆ, ಪಾನಕ ಹಾಗೂ ತಿಂಡಿ ತಿನಿಸುಗಳನ್ನು ಪ್ರಸಾದದ ರೂಪದಲ್ಲಿ ದಾನಿಗಳು ಭಕ್ತರಿಗೆ ವಿತರಿಸಿದರು.

ಇನ್ನು ಚಿಕ್ಕಜಾತ್ರೆ ಮಹೋತ್ಸವದಲ್ಲಿ ಭಾಗಿಯಾಗುತ್ತ ದೇವಾಲಯದ ಆನೆ ಗೌರಿ ಅನುಪಸ್ಥಿತಿ ಈ ಬಾರಿ ಎದ್ದು ಕಂಡಿತು. ಹುಣ್ಣಿಮೆಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ರಥೋತ್ಸವವನ್ನು ಕಣ್ತುಂಬಿಕೊಂಡರು. ಚಿಕ್ಕ ಜಾತ್ರೆ ಅಂಗವಾಗಿ ನಗರದ ಕಪಿಲಾ ನದಿಯಲ್ಲಿ ಡಿ.6 ರ ಶನಿವಾರ ರಾತ್ರಿ 7 ಗಂಟೆಗೆ ತೆಪ್ಪೋತ್ಸವ ಜರುಗಲಿದ್ದು, ದೇವಾಲಯದಲ್ಲಿ ನಡೆಯುವ ನಂದಿ ವಾಹನೋತ್ಸವದೊಂದಿಗೆ ಪ್ರಸಕ್ತ ವರ್ಷದ ಚಿಕ್ಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.