ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಹಾಗೂ ಬೆಳೆಹಾನಿಯನ್ನು ಪರಿಶೀಲಿಸಲು ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ, ವಿವಿಧ ಗ್ರಾಮಗಳಲ್ಲಿ ಬೆಳೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿತು.
ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥರಾದ ಡಾ. ಸುಧಾಂಬಾಗ್, ಆಶಿಸ್ ಪಾಂಡೆ, ಪ್ರದೀಪ್ ಕುಮಾರ್ ಹಾಗೂ ಕರಣ್ ಚೌದರಿ ಅವರನ್ನೊಳಗೊಂಡ ತಂಡ ನಂಜನಗೂಡು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಬರದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು.
ತಂಡವು ಚಿನ್ನದಗುಡಿಹುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಸವಟ್ಟಿಗೆ ಗ್ರಾಮದಲ್ಲಿ ವಿಬಿ–ಜಿರಾಮ್‌ಜಿ ಯೋಜನೆಯ ಕಾಮಗಾರಿ ಹಾಗೂ ನೀರುಗಾಲುವೆ ಪರಿಶೀಲಿಸಿತು. ಬಳಿಕ ನೇರಳೆ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ, ಚಿಕ್ಕ ಕವಲಂದೆಯಲ್ಲಿ ಜೋಳ ಬೆಳೆ ಹಾಗೂ ಚುಂಚನಹಳ್ಳಿ ಗ್ರಾಮದಲ್ಲಿ ಹತ್ತಿ, ಜೋಳ ಬೆಳೆಯನ್ನು ಪರಿಶೀಲಿಸಿದ ತಂಡವು, ಬೆಳೆಗಳ ಸ್ಥಿತಿ ಮತ್ತು ಮಳೆ ಕೊರತೆಯಿಂದ ರೈತರಿಗೆ ಉಂಟಾಗಿರುವ ನಷ್ಟದ ಬಗ್ಗೆ ರೈತರಿಂದ ನೇರವಾಗಿ ಮಾಹಿತಿ ಪಡೆದುಕೊಂಡಿತು.
ಇದೇ ಸಂದರ್ಭದಲ್ಲಿ ಚಿಕ್ಕಕವಲಂದೆ ಗ್ರಾಮದಲ್ಲಿ ಹೈನುಗಾರಿಕೆ ಚಟುವಟಿಕೆಗಳನ್ನು ವೀಕ್ಷಿಸಿ, ಬರ ಪರಿಸ್ಥಿತಿಯಿಂದ ಹೈನುಗಾರಿಕೆ ಕ್ಷೇತ್ರದ ಮೇಲೂ ಉಂಟಾಗಿರುವ ಪರಿಣಾಮದ ಕುರಿತು ರೈತರಿಂದ ಮಾಹಿತಿ ಸಂಗ್ರಹಿಸಲಾಯಿತು. ನಂಜನಗೂಡು ತಾಲ್ಲೂಕಿನಲ್ಲಿ 21,959 ಎಕ್ಟೆರ್ ಪ್ರದೇಶದ ಬೆಳೆಹಾನಿಯಾಗಿರುವ ಕುರಿತು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಬೆಳೆಹಾನಿ, ಮಳೆ ಕೊರತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಬರ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ತಂಡಕ್ಕೆ ಮನವರಿಕೆ ಮಾಡಿಕೊಡಲಾಯಿತು.
ತಾಲ್ಲೂಕಿನಲ್ಲಿ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣದಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಸುಮಾರು 25 ವರ್ಷಗಳ ಹಿಂದೆ ಕಂಡುಬಂದಂತಹ ಮಳೆ ಕೊರತೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ಹಾಗೂ ರೈತರು ತಂಡದ ಗಮನಕ್ಕೆ ತಂದರು. ಕೇಂದ್ರ ಬರ ಅಧ್ಯಯನ ತಂಡವು ರೈತರೊಂದಿಗೆ ಸಂವಾದ ನಡೆಸಿ, ಬೆಳೆ ಹಾನಿಯ ಪ್ರಮಾಣ, ಮಳೆ ಕೊರತೆ, ನೀರಿನ ಲಭ್ಯತೆ, ಕೃಷಿ ಚಟುವಟಿಕೆಗಳು ಹಾಗೂ ರೈತರ ಸಂಕಷ್ಟಗಳ ಕುರಿತು ನೇರವಾಗಿ ಮಾಹಿತಿ ಪಡೆದುಕೊಂಡಿತು. ಬಳಿಕ ಅಧಿಕಾರಿಗಳಿಂದ ತಾಲ್ಲೂಕಿನ ಬರ ಪರಿಸ್ಥಿತಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ವರದಿಗಳನ್ನು ಪಡೆದುಕೊಂಡಿತು.
ಕೇಂದ್ರ ತಂಡದ ಭೇಟಿ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ, ಜಂಟಿ ಕೃಷಿ ನಿರ್ದೇಶಕ ರವಿ, ಸಹಾಯಕ ನಿರ್ದೇಶಕ ಎಸ್.ಕೆ. ರವಿ, ಉಪ ಕೃಷಿ ನಿರ್ದೇಶಕ ರಾಜು ಸೇರಿದಂತೆ ಕೃಷಿ, ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ರೈತರು ಹಾಜರಿದ್ದರು.

