ನಂಜನಗೂಡು: ನಗರದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಕೆಂಪೇಗೌಡ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಕೆಂಪೇಗೌಡ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪಕವಾಗಿ ಬೆಳೆಯುತ್ತಿದೆ.
ಇಂದು ಸಿಲಿಕಾನ್ ಸಿಟಿಯಾಗಿದೆ ಎಂದರೆ ಅದಕ್ಕೆ ಕೆಂಪೇಗೌಡರು ಕಾರಣರಾಗಿದ್ದಾರೆ. ಕೆರೆ ಕಟ್ಟೆಗಳ ಅಭಿವೃದ್ಧಿಪಡಿಸಿ ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರವರ ನೇತೃತ್ವದಲ್ಲೇ ಜಯಂತಿ ಆಚರಣೆ ಮಾಡಲಾಯಿತು.

10 ಕೋಟಿ ರೂ. ಅನುದಾನ ನೀಡಲಾಗಿದೆ. ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಲಾಗಿದೆ. ನಂಜನಗೂಡು ತಾಲ್ಲೂಕಿನಲ್ಲಿ ಒಕ್ಕಲಿಗರ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಡಿ.ಕೆ ಶಿವಕುಮಾರ್ ರವರ ಜೊತೆ ಮಾತನಾಡಿ ಹೆಚ್ಚಿನ ಅನುದಾನ ತಂದು ಸಮುದಾಯ ಭವನ ನಿರ್ಮಾಣಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠ, ಉಪಾಧ್ಯಕ್ಷೆ ರಿಯಾನ ಬಾನು, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಾರುತಿ, ನರಸಿಂಹಮೂರ್ತಿ, ಕೃಷ್ಣಪ್ಪಗೌಡ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

