ನಂಜನಗೂಡು: ಮನೆಯ ಬಾಗಿಲು ಮೀಟಿ, ಬಿರುವಿನಲ್ಲಿಟ್ಟಿದ್ದ ನಗದು ಹಣ ಚಿನ್ನಾಭರಣವನ್ನು ಕಳ್ಳತನ ಮಾಡಿರುವ  ಘಟನೆ ನಂಜನಗೂಡು ನಗರದಲ್ಲಿ ನಡೆದಿದೆ.

ನಂಜನಗೂಡು ನಗರದ ಸಿಟಿಜನ್ ಶಾಲೆಯ ಜೋಡಿ ರಸ್ತೆಯ ಬಳಿ ವಾಸಿಸುವ ಪರಮೇಶ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.  ಕಳೆದ ಎರಡು ದಿನಗಳ ಹಿಂದೆ ಪರಮೇಶ್ ರವರು ಕುಟುಂಬ ಸಮೇತ ಹಾಸನಕ್ಕೆ ತೆರಳಿದ್ದರೂ. ಬಾಗಿಲು ತೆರೆದಿರುವ ಬಗ್ಗೆ ಅಕ್ಕಪಕ್ಕದ ಮನೆಯವರು ಅವರಿಗೆ ತಿಳಿಸಿದ್ದಾರೆ.

ಪರಮೇಶ್ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಬಾಗಿಲನ್ನು ಮೀಟಿ ಒಳಗಡೆ ಪ್ರವೇಶಿಸಿರುವ ಖದೀಮರು, ಬೀರುವಿನಲ್ಲಿದ್ದ 50 ಸಾವಿರ ನಗದು, ದಿನ ಬಳಕೆಯ ಚಿನ್ನಾಭರಣ, ದೇವರ ಮನೆಯಲ್ಲಿದ್ದ ಹುಂಡಿಯನ್ನು ಕದ್ದೊಯ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು, ಶ್ವಾನ ದಳದ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡು ಕಳ್ಳರಿಗೆ ಬಲೆ ಬೀಸಿದ್ದಾರೆ.

ಈ ಮುಖ್ಯ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲ. ರಾತ್ರಿ ವೇಳೆ ಯಾರು ಬರ್ತಾರೆ ಹೋಗ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಕೂಡಲೇ ಬೀದಿದೀಪಗಳನ್ನು ಅಳವಡಿಸಬೇಕು. ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿ ಪರಮೇಶ್ ಒತ್ತಾಯಿಸಿದ್ದಾರೆ.