ಮೈಸೂರು: ಅಂಬೇಡ್ಕರ್ ಅಥವಾ ಕುವೆಂಪುರವರ ಪ್ರತಿಮೆ ಸ್ಥಾಪನೆ ಆಗಬೇಕಿದ್ದ ವಿವಾದಿತ ಜಾಗದಲ್ಲಿ ಪೊಲೀಸರ ಕಾರು ಪಾರ್ಕಿಂಗ್ ಆಗಿದೆ. ಮೈಸೂರಿನ ಪ್ರತಿಷ್ಠಿತ ಸರ್ಕಲ್ ಮಾತೃಮಂಡಳಿ ವೃತ್ತದಲ್ಲಿ ಕಂಡು ಬಂದ ದೃಶ್ಯ ಇದು. ವೃತ್ತದ ಮಧ್ಯಭಾಗದಲ್ಲಿ ಕಾರ್ ನಿಂತಿದೆ.

ಅದರ ಸುತ್ತಲೂ ಬ್ಯಾರಿಕೇಡ್ ಗಳನ್ನ ಅಳವಡಿಸಲಾಗಿದೆ. ಈ ಹಿಂದೆ ಈ ವೃತ್ತದಲ್ಲಿ ಅಂಬೇಡ್ಕರ್ ಹಾಗೂ ಕುವೆಂಪು ರವರ ಪ್ರತಿಮೆ ಸ್ಥಾಪನೆಗೆ ಭಾರಿ ವಿವಾದವಾಗಿತ್ತು. ಪ್ರತಿಮೆ ಸ್ಥಾಪನೆಗಾಗಿ ಎರಡು ಸಮುದಾಯ ನ್ಯಾಯಾಲಯದ ಮೆಟ್ಟಿಲೇರಿವೆ. ಹಲವು ವರ್ಷಗಳಿಂದ ಯಾವುದೇ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡದ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ವಿವಾದಿತ ಸ್ಥಳದಲ್ಲಿ 24 ಗಂಟೆ ಪೊಲೀಸ್ ವಾಹನ ನಿಯೋಜಿಸಲಾಗಿದೆ. ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಅಂಗವಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಜೀಪ್ ನಿಲ್ಲಿಸಿ ಅಲರ್ಟ್ ಆಗಿದ್ದು ಶ್ಲಾಘನೀಯ. ಪೊಲೀಸರ ಸಮಯೋಚಿತ ನಿರ್ಧಾರಕ್ಕೆ ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದೆ.