ನಂಜನಗೂಡು: ಹಣ ಕೊಟ್ರಷ್ಟೇ ಇಲ್ಲಿ ಜನನ ಮತ್ತು ಮರಣ ದೃಡೀಕರಣ ಪತ್ರವನ್ನು ನೀಡ್ತಾರಂತೆ. ಅಧಿಕಾರಿಯೊಬ್ಬ ರಾಜಾರೋಷವಾಗಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗ್ತಿದೆ.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿರುವ ಜನನ ಮತ್ತು ಮರಣ ಶಾಖೆಯಲ್ಲಿ ಕೇಸ್ ವರ್ಕರ್ ಮೋಹನ್ ಎಂಬಾತ ಯಾವುದೇ ರಸೀದಿಯನ್ನು ನೀಡದೆ ಹಣವನ್ನು ಜೆಬಿಗಿಳಿಸುತ್ತಿರುವ ಮೊಬೈಲ್ ವಿಡಿಯೋ ಸೆರೆಯಾಗಿದೆ.
ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಕಛೇರಿಯಲ್ಲಿ ಕುಳಿತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ರಸೀದಿಯನ್ನು ಹಾಕದೆ ಸರ್ಕಾರಕ್ಕೆ ದೋಖಾ ಮಾಡಲಾಗುತ್ತಿದೆ. ಜನನ ಮತ್ತು ಮರಣ ಪತ್ರವನ್ನು ಪಡೆದುಕೊಳ್ಳಲು 100 ರೂ.ನಿಂದ ಸಾವಿರದ ತನಕ ಕೊಡಬೇಕಂತೆ. ಇಲ್ಲದಿದ್ದರೆ ಸರ್ಟಿಫಿಕೇಟ್ ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳ್ತಾರೆ ಅಂತ ರೈತರು ಆರೋಪಿಸಿದ್ದಾರೆ.
ಸತ್ತೋದ್ರು, ಹುಟ್ಟಿದ್ರು ಸರ್ಟಿಫಿಕೇಟ್ ತೆಗೆದುಕೊಳ್ಳೋಕೆ ಇಲ್ಲಿ ಲಂಚ ಕೊಡಲೇಬೇಕು. ಮೋಹನ್ ಎಂಬ ಅಧಿಕಾರಿ ಹಣವನ್ನು ತೆಗೆದುಕೊಳ್ಳುತ್ತಿರುವುದನ್ನು ನಾವು ಮೊಬೈಲ್ ಮೂಲಕ ವಿಡಿಯೋ ಮಾಡಿದ್ದೇವೆ. ಹಣ ತೆಗೆದುಕೊಂಡರೆ ಕಡ್ಡಾಯವಾಗಿ ರಸೀದಿ ಕೊಡಬೇಕು. ಆದರೆ, ಯಾವುದೇ ರಸೀದಿಯನ್ನು ಕೊಡದೆ ಅಧಿಕಾರಿಗಳು ಹಣವನ್ನು ತೆಗೆದುಕೊಂಡು ಸರ್ಟಿಫಿಕೇಟ್ ನೀಡುತ್ತಾರೆ.
ತಾಲ್ಲೂಕು ಕಛೇರಿಯಲ್ಲಿ ದುಡ್ಡು ಕೊಟ್ಟರಷ್ಟೇ ಕೆಲಸ ಆಗುತ್ತದೆ ಇಲ್ಲ ಅಂದರೆ ಯಾವುದೇ ಕೆಲಸಗಳು ಆಗುವುದಿಲ್ಲ. ತಾಲ್ಲೂಕು ಕಛೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಧಿಕಾರಿಗಳ ವರ್ತನೆ ಮಿತಿಮೀರಿದೆ. ತಹಶೀಲ್ದಾರ್ ರವರ ಮಾತಿಗೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳು ವರ್ಷ ಕಳೆದರೂ ಆಗುವುದೇ ಇಲ್ಲ.
ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಇಂತಹ ಭ್ರಷ್ಟ ಅಧಿಕಾರಿಗಳನ್ನು ತಾಲ್ಲೂಕಿನಿಂದ ಗೇಟ್ ಪಾಸ್ ಕೊಡ್ಬೇಕು, ಸಾರ್ವಜನಿಕರಿಂದ ಹಣವನ್ನು ಲೂಟಿ ಮಾಡುತ್ತಿರುವ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

