ನಂಜನಗೂಡು: ಬ್ರೇಕ್ ಫೇಲ್ಯೂರ್ ಆದ ಪರಿಣಾಮ ಸಾರಿಗೆ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಕಲ್ಮಹಳ್ಳಿ ಗ್ರಾಮದ ಗೇಟ್ ಬಳಿ ನಡೆದಿದೆ.

ನಂಜನಗೂಡು ಮತ್ತು ತಿ.ನರಸೀಪುರ ಮಾರ್ಗವಾಗಿ ತೆರಳುತ್ತಿದ್ದ ನಂಜನಗೂಡು ಮೈಸೂರು ನಾಮಫಲಕದ ಸಾರಿಗೆ ಬಸ್ ಇದಾಗಿದ್ದು, ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಬ್ರೇಕ್ ವಿಫಲವಾಗಿ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬುಡಸಮೇತ ವಿದ್ಯುತ್ ಕಂಬ ಮುರಿದು ಬಿದ್ದಿದೆ. ವಿದ್ಯುತ್ ಕಂಬ ಬಿದ್ದ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಇದರಿಂದ ಬಸ್ ಚಾಲಕ ಮತ್ತು ನಿರ್ವಾಹಕ, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ವಿಷಯ ತಿಳಿದ ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುರಿದು ಬಿದ್ದಿರುವ ವಿದ್ಯುತ್ ಕಂಬವನ್ನು ಸರಿಪಡಿಸಲು ಮುಂದಾಗಿದ್ದಾರೆ.

ಅಪಘಾತದಿಂದಾಗಿ ನಂಜನಗೂಡು ಮತ್ತು ತಿ. ನರಸೀಪುರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ವಾಹನ ಸವಾರರು ಪರದಾಡಿದರು. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.