ನಂಜನಗೂಡು: ಗೆಳತಿಯ ಫೋನ್ ರಿಸೀವ್ ಮಾಡಿದ ಗೆಳೆಯನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ. ಕೇವಲ ಫೋನ್ ರಿಸೀವ್ ಮಾಡಿದ್ದಕ್ಕೆ ಬೈಕ್ ನಲ್ಲಿ ಗುದ್ದಿ ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಸ್ನೇಹಿತರ ವಿರುದ್ದ ಪ್ರಕರಣ ದಾಖಲಾಗಿದ್ದು ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ.
ಕೆಂಪಿಸಿದ್ದನಹುಂಡಿ ಗ್ರಾಮದ ವಸಂತ್ ಕುಮಾರ್, ಮಧುಸೂದನ್, ಚಂದ್ರು, ರವಿಚಂದ್ರ, ಸಿದ್ದರಾಜು ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ. ಕಿರಣ್ ಮೃತ ದುರ್ದೈವಿ.
ಜು.15 ರಂದು ಸ್ನೇಹಿತ ರವಿಚಂದ್ರನ್ ಹುಟ್ಟುಹಬ್ಬ ಇತ್ತು. ಕಿರಣ್ ಬರ್ತಡೇ ಪಾರ್ಟಿ ಆಚರಿಸಲು 5 ಮಂದಿ ಸ್ನೇಹಿತರ ಜೊತೆ ಹೊರಟ. ಹೆಜ್ಜಿಗೆ ಸೇತುವೆಯ ತೋಪಿನ ಬಳಿ 6 ಮಂದಿ ಸೇರಿ ಎಣ್ಣೆ ಪಾರ್ಟಿ ಶುರುಮಾಡಿದ್ರು.

ವಸಂತ್ ಮೂತ್ರ ವಿಸರ್ಜನೆ ಮಾಡಲು ಸ್ವಲ್ಪದೂರ ಹೋಗಿದ್ದಾನೆ. ಈ ವೇಳೆ ವಸಂತ್ ಫೋನ್ ರಿಂಗ್ ಆಗಿ ಕಿರಣ್ ರಿಸೀವ್ ಮಾಡಿದ್ದಾನೆ. ರಶ್ಮಿ ಎಂಬಾಕೆಯಿಂದ ಫೋನ್ ಬಂದಿತ್ತು. ಫೋನ್ ಯಾಕೆ ರಿಸೀವ್ ಮಾಡಿದ್ದೀಯ ಎಂದು ಪ್ರಶ್ನಿಸಿದ್ದಾನೆ. ಕೆಲ ಸಮಯದ ನಂತರ ಮತ್ತೆ ರಶ್ಮಿಯಿಂದ ಬಂದ ಫೋನ್ ವಸಂತ್ ರಿಸೀವ್ ಮಾಡಿದಾಗ ಕಿರಣ್ ರಿಸೀವ್ ಮಾಡಿದ್ದ ವಿಚಾರ ಗೊತ್ತಾಯಿತು.ಇಷ್ಟಕ್ಕೇ ಇಬ್ಬರ ನಡುವೆ ಗಲಾಟೆ ಶುರುವಾಯ್ತು. ವಸಂತ್ ಜೊತೆ ಸೇರಿದ ನಾಲ್ವರು ಸ್ನೇಹಿತರು ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ.
ಸ್ಕೂಟರ್ ನಿಂದ ಗುದ್ದಿ ಕೆಳಗೆ ಬೀಳಿಸಿ ಹಲ್ಲೆ ನಡೆಸಿ ಪರಾರಿಯಾದರು. ಮಾಹಿತಿ ಅರಿತ ಸಹೋದರ ಅಣ್ಣನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಮೃತಪಟ್ಟಿದ್ದಾನೆ. ಯುವತಿಯ ಫೋನ್ ರಿಸೀವ್ ಮಾಡಿದ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತ ಎನ್ನುವುದನ್ನ ಮರೆತು ಬರ್ತಡೇ ಪಾರ್ಟಿ ದಿನವೇ ಗೆಳೆಯನನ್ನ ಕೊಂದಿದ್ದಾರೆ. ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆುತ್ತಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

