ಕೊಳ್ಳೇಗಾಲ: ಮದುವೆಯಲ್ಲಿ ಶಾಲು-ಹಾರದ ಬದಲು ಪುಸ್ತಕ ಕೊಡುವ ವಿಶಿಷ್ಟ ಆಚರಣೆಗೆ ಕರ್ನಾಟಕ ಭೀಮ್ ಸೇನೆಯ ಮುಖಂಡರು ಮುನ್ನುಡಿ ಬರೆದಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ಭೀಮ್ ಸೇನೆಯ ಮೈಸೂರು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮುಳ್ಳೂರು ಪ್ರಕಾಶ್ ಅವರ ನಾದಿನಿ ಸೌಮ್ಯ ಮತ್ತು ಎನ್. ಸುರೇಶ್ ಬಾಬು ಅವರ ವಿವಾಹ ಸಮಾರಂಭ ಇದಕ್ಕೆ ಸಾಕ್ಷಿಯಾಯಿತು.

ವಿವಾಹಕ್ಕೆ ಆಗಮಿಸಿದ್ದ ಗಣ್ಯರಿಗೆ ಮತ್ತು ಸಂಬಂಧಿಕರಿಗೆ ವಿವಾಹ ಆಮಂತ್ರಣದ ಜೊತೆಗೆ ಸಂವಿಧಾನದ ಪೀಠಿಕೆಯ ಫೋಟೋ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಕಣ್ಣೀರಿಟ್ಟ ಕ್ಷಣಗಳು ಎಂಬ ಪುಸ್ತಕವನ್ನು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಭೀಮ್ ಸೇನೆಯ ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ ಅವರು, ಇದು ಒಂದು ಮಾದರಿಯಾಗುವ ಮದುವೆ. ಮದುವೆಗೆ ಆಗಮಿಸಿದ್ದ ಜನರಿಗೆ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮುಳ್ಳೂರು ಪ್ರಕಾಶ್ ಅವರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲು ಹಾರ ಹಾಕುವ ಬದಲು ಪುಸ್ತಕಗಳನ್ನು ಕೊಡುವ ಸಂಸ್ಕೃತಿ ಬೆಳೆಯಬೇಕು ಎಂದು ಹೇಳಿದರು.

ವಿವಾಹದಂತಹ ಶುಭ ಕಾರ್ಯಕ್ರಮಗಳನ್ನು ಸಮಾಜಮುಖಿ ಚಿಂತನೆಗಳ ಪ್ರಚಾರಕ್ಕೆ ಬಳಸಿಕೊಳ್ಳಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಪ್ರತಿಯೊಬ್ಬರ ಮನೆಗೂ ತಲುಪಬೇಕು ಎಂದರು.

ಈ ವೇಳೆ ಮಾಜಿ ಸಚಿವರಾದ ಎನ್. ಮಹೇಶ್ ಅವರು ಸಮಾರಂಭಕ್ಕೆ ಆಗಮಿಸಿ ನೂತನ ವಧು-ವರರಾದ ಸೌಮ್ಯ ಮತ್ತು ಸುರೇಶ್ ಬಾಬು ಅವರಿಗೆ ಆಶೀರ್ವದಿಸಿದರು. ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಪುಸ್ತಕದ ಮೂಲಕ ಪ್ರಜ್ಞೆ ಮೂಡಿಸಿದ ವಿವಾಹಕ್ಕೆ ಸರ್ವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿವಾಹ ಸಮಾರಂಭದಲ್ಲಿ ಕರ್ನಾಟಕ ಭೀಮ್ ಸೇನೆ ಪದಾಧಿಕಾರಿಗಳು, ಸಮಾಜದ ಗಣ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಬಂಧು-ಮಿತ್ರರು ಭಾಗವಹಿಸಿದ್ದರು.