ಮೈಸೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಂಧನ ಖಂಡಿಸಿ, ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಚೇರಿ ಕಡೆಗೆ ನುಗ್ಗಲು ಯತ್ನಿಸಿದ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಮೆಟ್ರೋಪೋಲ್ ವೃತ್ತದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತುರ್ತು ಪರಿಸ್ಥಿತಿ ಹೇರಿದ ಕುಖ್ಯಾತಿಯ ಕಾಂಗ್ರೆಸ್ ಕರ್ನಾಟಕದಲ್ಲಿ ಇದೀಗ ಪರೋಕ್ಷ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ. ಪ್ರಜಾಪ್ರಭುತ್ವ ದೇಗುಲವೆನಿಸಿರುವ ಸುವರ್ಣ ಸೌಧಕ್ಕೆ ಗೂಂಡಾಗಳನ್ನು ಛೂ ಬಿಟ್ಟು ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ದುಷ್ಕೃತ್ಯ ನಡೆಸಲು ಪ್ರಚೋದಿಸಿದೆ.

ಇದೀಗ ಹಲ್ಲೆ ಯತ್ನಕ್ಕೊಳಗಾದ ಹಿರಿಯ ಶಾಸಕ ಸಿ.ಟಿ.ರವಿ ಅವರನ್ನೇ ಬಂಧಿಸಿ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಗೂಂಡಾ ಸಾಮ್ರಾಜ್ಯ ನಿರ್ಮಿಸುತ್ತಿದೆ ಎಂದು ಕಿಡಿ ಕಾರಿದರು. ಸದನದ ಒಳಗಿನ ಘಟನೆಯನ್ನು ಉಲ್ಲೇಖಿಸಿ ದೂರು ಪಡೆದುಕೊಂಡು ಸಿ.ಟಿ.ರವಿ ಅವರನ್ನು ಬಂಧಿಸಿರುವ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುಣಿಕೆ ಬಿಗಿಯುವ ಸರ್ವಾಧಿಕಾರಿ ಧೋರಣೆ. ವಿಧಾನಮಂಡಲದ ಘನತೆ ಹಾಗೂ ಅದರ ಸಾಂವಿಧಾನಿಕ ಶಕ್ತಿಯನ್ನು ಮಣ್ಣು ಪಾಲಾಗಿಸುವ ದಾರ್ಷ್ಟ್ಯತನ ಮೆರೆಯಲು ಕಾಂಗ್ರೆಸ್ ಹೊರಟಿದೆ.

ಮತ್ತೊಂದು ತುರ್ತು ಪರಿಸ್ಥಿತಿ ಹೇರಿಕೆಯ ಪರೋಕ್ಷ ಹವಣಿಕೆಯಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಉಳಿಸಿ ಗೂಂಡಾ ಕಾಂಗ್ರೆಸ್ ತೊಲಗಿಸಬೇಕಿದೆ. ಸಿ.ಟಿ.ರವಿ ಅವರನ್ನು ಬೇಷರತ್ ಬಿಡುಗಡೆ ಮಾಡಿ ಅವರ ಮೇಲೆ ದೌರ್ಜನ್ಯ ನಡೆಸಿದ ಕಾಂಗ್ರೆಸ್ ಗೂಂಡಾಗಳನ್ನು ಜೈಲಿಗೆ ಅಟ್ಟುವ ವರೆಗೂ ಬಿಜೆಪಿ ಹೋರಾಟ ಮುಂದುವರೆಯುತ್ತದೆ ಎಂದ ಎಚ್ಚರಿಸಿದರು. ಬಳಿಕ ಮುಖಂಡರು ಪ್ರತಿಭಟನೆ ಮುಗಿಸಿ ಹೊರಡುತ್ತಿದ್ದಂತೆ, ಕೆಲ ಕಾರ್ಯಕರ್ತರು ಬ್ಯಾರಿಕೇಡ್ ತೆಗೆದು ಕಾಂಗ್ರೆಸ್ ಕಚೇರಿಯ ಕಡೆಗೆ ನುಗ್ಗಲು ಯತ್ನಿಸಿದರು. ಅವರನ್ನು ತಡೆದ ಪೊಲೀಸರು ಬಂಧಿಸಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಒಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಮಾಜಿ ಮೇಯರ್ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಎಚ್.ಜಿ.ಗಿರಿಧರ್, ಕೇಬಲ್ ಮಹೇಶ್, ಕಿರಣ್ ಜಯರಾಮ್, ಹೇಮಂತ್ ಕುಮಾರ್, ಯಶಸ್ವಿ ಸೋಮಶೇಖರ್, ದಿನೇಶ್ ಗೌಡ, ಸ್ಮಾರ್ಟ್ ಮಂಜು, ರಾಕೇಶ್ ಭಟ್, ರಘು ಅರಸ್, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಸಚಿನ್, ಲೋಹಿತ್, ರುದ್ರಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.