ನಂಜನಗೂಡು : 2025ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಪ್ರತಿಷ್ಠಿತ ಔಷಧಿ ಕಂಪನಿಗಳ ಮಾಫಿಯಾ ಗಳೊಂದಿಗೆ ಕೈಜೋಡಿಸಿ, ಆಸ್ಪತ್ರೆ ಆವರಣಗಳಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಆದೇಶ ಮಾಡಿದ್ದಾರೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಆರೋಪಿಸಿದರು.

ನಂಜನಗೂಡು ಪಟ್ಟಣದ ಮೈಸೂರು ಮುಖ್ಯ ರಸ್ತೆಯಲ್ಲಿರುವ ತಾಲ್ಲೂಕು ಆರೋಗ್ಯ ಕೇಂದ್ರದ ಮುಂಭಾಗ ತಾಲ್ಲೂಕು ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. 2008 ರಲ್ಲಿ ಕೇಂದ್ರ ಸರ್ಕಾರ ಜನ ಔಷಧಿ ಕೇಂದ್ರಗಳನ್ನು ಬಡವರ ಹಿತ ದೃಷ್ಟಿಯಿಂದ ಸ್ಥಾಪನೆ ಮಾಡಲಾಗಿತ್ತು. 2016ರಲ್ಲಿ ಈ ಮಳಿಗೆಗಳನ್ನು ಪ್ರಧಾನಮಂತ್ರಿ ಜನೌಷದ ಕೇಂದ್ರಗಳಾಗಿ ಬದಲಾವಣೆ ಮಾಡಲಾಗಿತ್ತು. ಬಡವರಿಗೆ ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಾಗುತ್ತಿವೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ಇಂದು ಔಷಧಿ ಕಂಪನಿಗಳ ಜೊತೆಗೆ ವಿಲೀನಗೊಂಡು ಕೇಂದ್ರ ಸರ್ಕಾರದ ಈ ಮಳಿಗೆಗಳನ್ನು ಮುಚ್ಚಲು ಆದೇಶ ಮಾಡಿದ್ದಾರೆ. ಇದರಿಂದ ಕೇವಲ 20 ರಿಂದ 30 ಗಳಿಗೆ ದೊರಕುತ್ತಿದ್ದ ಔಷಧಿಗಳು ಖಾಸಗಿ ಕೇಂದ್ರಗಳಲ್ಲಿ 200 ರಿಂದ 250 ಕೊಟ್ಟು ಖರೀದಿ ಮಾಡಬೇಕು. ಸರ್ಕಾರ ಗ್ಯಾರಂಟಿ ಯೋಜನೆಗಳು ಅಂತ ಮೈಸೂರಿನಿಂದ ಬೆಂಗಳೂರು ವರೆಗೆ ದೊಡ್ಡ ದೊಡ್ಡ ಜಾಹೀರಾತು ಫಲಕಗಳನ್ನು ಹಾಕಿದ್ದಾರೆ. ಇದೇನ ಗ್ಯಾರಂಟಿ ಯೋಜನೆ ಎಂದು ಪ್ರಶ್ನೆ ಮಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರು ಇಂತಹ ಮಳಿಗೆಗಳ ಮೂಲಕ ಬಡವರಿಗೆ ಪ್ರತಿಯೊಂದು ಕಾಯಿಲೆಗಳಿಗೂ ಕಡಿಮೆ ದರದಲ್ಲಿ ಔಷಧ ವಸ್ತುಗಳನ್ನು ಪೂರೈಕೆ ಮಾಡುವ ಉದ್ದೇಶವನ್ನು ಹೊಂದಿದ್ದರು. ರಾಜ್ಯ ಸರ್ಕಾರದ ಈ ನಡೆಯನ್ನ ಖಂಡಿಸಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರ ಕರೆ ಮೇರೆಗೆ ರಾಜ್ಯಾದ್ಯಂತ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ.

ಮುಂದಿನ ದಿನಗಳಲ್ಲಿ ಆದೇಶವನ್ನು ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ಕಚೇರಿ ರಾಜಸ್ವ ನಿರೀಕ್ಷಕ ರಾಜು ರವರಿಗೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು, ಚಿಕ್ಕ ರಂಗ ನಾಯಕ, ಬಾಲ ಚಂದ್ರು, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಮಹದೇವ ಪ್ರಸಾದ್, ಸಿದ್ದರಾಜು, ಮನೋಜ್, ಮಾಜಿನಗರ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಹಿರಿಯ ಮುಖಂಡ ಕೃಷ್ಣಪ್ಪ, ಗೋಳೂರು ಸತ್ಯ ಕೇಂದ್ರ ಅಧ್ಯಕ್ಷರು ಕಾಳಪ್ಪ, ಚಾಮಲಾಪುರಹುಂಡಿ ಚಂದ್ರು, ಶಂಕರಪ್ಪ, ಮಹೇಶ್ ಅತ್ತಿ ಖಾನೆ, ವಿಷ್ಣು ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.