ನಂಜನಗೂಡು: ಠಾಣೆ ಆವರಣದಲ್ಲಿರುವ ಕ್ಯಾಂಟೀನ್ ನಲ್ಲಿ ಖಾಸಗಿ ವ್ಯಕ್ತಿಗಳು ಬರ್ತಡೇ ಪಾರ್ಟಿ ಆಚರಿಸುವ ಮೂಲಕ ಸರ್ಕಾರದ ಜಾಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಂಗತಿಯೊಂದು ಬೆಳಕಿಗೆ ಬಂದಿದೆ.

ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಸೇರಿದ ಕ್ಯಾಂಟೀನ್ ದುರುಪಯೋಗವಾಗುತ್ತಿರುವ ಆರೋಪ ಕೇಳಿ ಬಂದಿದೆ. ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಠಾಣೆಗೆ ಬರುವ ಸಾರ್ವಜನಿಕರಿಗೆ ಉಪಯೋಗವಾಗಲೆಂದು ಈ ಕ್ಯಾಂಟೀನ್ ತೆರೆಯಲಾಗಿದೆ. ಖಾಸಗಿ ವ್ಯಕ್ತಿಯೊಬ್ಬ ಗುತ್ತಿಗೆ ಪಡೆದು ಕ್ಯಾಂಟೀನ್ ನಡೆಸುತ್ತಿದ್ದಾನೆ.

ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಬಾರದೆಂಬ ನಿಯಮಗಳಿವೆ. ಆದ್ರೆ ಈ ಕ್ಯಾಂಟೀನ್ ನಲ್ಲಿ ಪೊಲೀಸ್ ಇಲಾಖೆ ನಿಯಮಗಳನ್ನು ನಿಯಮಗಳನ್ನ ಗಾಳಿಗೆ ತೂರಿ ಬರ್ತಡೇ ಪಾರ್ಟಿ ಆಚರಿಸಲಾಗಿದೆ. ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ.

ಈ ಹಿಂದೆ ಈ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಯೊಬ್ಬರು ಕ್ಯಾಂಟೀನ್ ನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಅಪಸ್ವರವೆತ್ತಿ ಸ್ಥಗಿತಗೊಳಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗೆ ಪತ್ರ ಬರೆದಿದ್ದರೆಂದು ಹೇಳಲಾಗಿದೆ. ಹೀಗಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿಲ್ಲದಿರುವುದು ಇದೀಗ ಖಚಿತವಾಗಿದೆ.

ಠಾಣೆ ಆವರಣದಲ್ಲಿರುವ ಕ್ಯಾಂಟೀನ್ ಹೀಗೆ ದುರುಪಯೋಗವಾದ್ರೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಕಾರ್ಯಕ್ರಮ ನಡೆದಿರುವುದು ಠಾಣಾಧಿಕಾರಿ ಗಮನಕ್ಕೆ ಬಂದಿಲ್ಲವೇ…? ಬಂದಿದ್ದರೂ ನಡೆಸಲು ಅನುಮತಿ ನೀಡಿದ್ದು ಏಕೆ…?ಠಾಣಾಧಿಕಾರಿ ಅನುಮತಿ ಇಲ್ಲದೆ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯವೇ…? ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ…? ಎಂಬ ಪ್ರಶ್ನೆಗಳಿಗೆ ಠಾಣಾಧಿಕಾರಿ ಉತ್ತರ ನೀಡಬೇಕಿದೆ.