ನಂಜನಗೂಡು: ಬೈಕ್ ನಲ್ಲಿ ಚಲಿಸುತ್ತಿದ್ದಾಗ ಟೈಯರ್ ಬ್ಲಾಸ್ಟ್ ಆಗಿ ಮೂವರಿಗೆ ಗಂಭೀರ ಗಾಯಗೊಂಡು, ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಣೇಶಪುರ ಗ್ರಾಮದ ಬಿಳಿ ಸಂಭವಿಸಿದೆ.
ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಮಹದೇವಸ್ವಾಮಿ ಎಂಬುವವರ ಪುತ್ರಿ ಸಿಂಚನ (16) ಮೃತ ದುರ್ದೈವಿ. ಮಹದೇವಸ್ವಾಮಿ ತನ್ನ ಪತ್ನಿ, ಮಗಳು ಮತ್ತು ಮಗನ ಜೊತೆ ಬೈಕ್ ನಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿಯ ದೇವಾಲಯಕ್ಕೆ ತೆರಳಿ ವಾಪಸ್ ಮಡುವಿನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ಹೆಡಿಯಾಲ ಮತ್ತು ಬೇಗೂರು ಮುಖ್ಯರಸ್ತೆಯ ಗಣೇಶಪುರ ಗ್ರಾಮದ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ನ ಟೈಯರ್ ಬ್ಲಾಸ್ಟ್ ಆಗಿದೆ.
ಇದರಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ನಾಲ್ವರು ಬಿದ್ದಿದ್ದಾರೆ. ಈ ವೇಳೆ ನಾಲ್ವರಿಗೂ ಗಂಭೀರ ಗಾಯಗಳಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರ್ಗ ಮಧ್ಯೆ ಸಿಂಚನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಿಂಚನ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಳು. ಅಪಘಾತ ಆಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

