ನಂಜನಗೂಡು: ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಕಳಲೆ ಗೇಟ್ ಬಳಿ ನಡೆದಿದೆ.

ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮದ ಚಿನ್ನಸ್ವಾಮಪ್ಪ (55) ಮೃತ ದುರ್ದೇವಿ. ಹೆಮ್ಮರಗಾಲ ಗ್ರಾಮದ ರಾಮೇಗೌಡ (55) ವ್ಯಕ್ತಿಗೆ ಗಂಭೀರ ಗಾಯವಾಗಿದೆ. ನಂಜನಗೂಡು ಮತ್ತು ಊಟಿ ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಳಲೆ ಗ್ರಾಮದ ಗೇಟ್ ಬಳಿ ಚಿನ್ನಸ್ವಾಮಪ್ಪ ಮತ್ತು ರಾಮೇಗೌಡ ದ್ವಿಚಕ್ರ ವಾಹನದಲ್ಲಿ ಕಳಲೆ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅತಿ ವೇಗವಾಗಿ ಬಂದ ಕಾರಿನ ಚಾಲಕ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಚಿನ್ನಸ್ವಾಮಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ರಾಮೇಗೌಡ ಎಂಬುವರಿಗೆ ಗಂಭೀರ ಗಾಯಗಳಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಎಎಸ್ ಪಿ ಮಲ್ಲಿಕ್, ಡಿವೈಎಸ್ಪಿ ರಘು, ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳಾನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.