ಮೈಸೂರು: ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಭವಿಷ್ಯ ಕಾಪಾಡುವ ದೃಷ್ಟಿಯಿಂದ ಆನ್ ಲೈನ್ ಬೆಟ್ಟಿಂಗ್ ಆ್ಯಪ್ಗಳನ್ನು ನಿಷೇಧಿಸುವಂತೆ ಯುವಭಾರತ್ ಸಂಘಟನೆ ಮತ್ತು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪದಾಧಿಕಾರಿಗಳು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ರವರಿಗೆ ಮತ್ತು ಸಿದ್ಧಾರ್ಥನಗರದಲ್ಲಿರುವ ಮೈಸೂರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಮನವಿ ಪತ್ರ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಅನೇಕ ವಿಡಿಯೋ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್ಗಳು ಜಾಹೀರಾತುಗಳ ಮೂಲಕ ಯುವಕರನ್ನು ಸುಲಭವಾಗಿ ಆಕರ್ಷಿಸುತ್ತಿದ್ದು. ಈ ಆ್ಯಪ್ಗಳ ಪರಿಣಾಮ ಯುವಕರು ಕ್ಷಣಿಕ ಮೋಜುಮಸ್ತಿ ಹಣದ ಲಾಲಸೆಗೆ ಒಳಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು. ಕೆಲವರು ಆತ್ಮಹತ್ಯೆಯಿಂದ ಜೀವ ಕಳೆದುಕೊಂಡು ಹಲವಾರು ಕುಟುಂಬಗಳು ಶೋಚನೀಯ ಪರಿಸ್ಥಿತಿಯಲ್ಲಿದೆ.ಇದುಅಪರಾಧ ಚಟುವಟಿಕೆಗಳಿಗೂ ಆಸ್ಪದ ಮಾಡಿದಂತಾಗಿದೆ.
ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳು ಆರಂಭವಾಗಲಿದ್ದು, ವಿದ್ಯಾರ್ಥಿಗಳು ಈಗಾಗಲೇ ಮಾನಸಿಕ ಒತ್ತಡದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬೆಟ್ಟಿಂಗ್ ಆ್ಯಪ್ಗಳ ಹಾವಳಿಯಿಂದಾಗಿ ಮತ್ತಷ್ಟು ತೊಂದರೆಗೆ ಸಿಲುಕಲಿದ್ದು, ಅವರ ಶಿಕ್ಷಣ ಹಾಗೂ ಭವಿಷ್ಯಕ್ಕೂ ಮಾರಕವಾಗಲಿದೆ. ಹೀಗಾಗಿ ಇಂತಹ ಬೆಟ್ಟಿಂಗ್ ಆ್ಯಪ್ಗಳನ್ನು ಕೂಡಲೇ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.
ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿಮಂಜು, ಅಖಿಲ ಭಾರತ್ ಗ್ರಾಹಕ ಸದಸ್ಯ ವಿಕ್ರಮ್ ಅಯ್ಯಂಗಾರ್, ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ನಿರೂಪಕ ಅಜಯ್ ಶಾಸ್ತ್ರೀ, ಆನಂದ್, ಮಹೇಶ್, ಮಹದೇವ್, ರಾಜೇಶ್ ಮುಂತಾದವರು ಇದ್ದರು.

