ನಂಜನಗೂಡು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಂಜನಗೂಡು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಡಾ .ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.

ನಂತರ ನಂಜನಗೂಡು ನಗರದ ಎಂಜಿ ರಸ್ತೆಯ ಮೂಲಕ ಡೊಳ್ಳು, ತಮಟೆ ನಗಾರಿಯೊಂದಿಗೆ ಹರ್ಷ ವ್ಯಕ್ತಪಡಿಸುವುದರ ಜೊತೆಗೆ ಜೈಕಾರದ ಘೋಷಣೆಗಳನ್ನು ಕೂಗಿ ಮೆರವಣಿಗೆ ಹೊರಟು ನಂಜನಗೂಡಿನ ನಂಜುಂಡೇಶ್ವರನ ದೇವಾಲಯದ ಆವರಣದಲ್ಲಿ ಆಯೋಜನೆ ಮಾಡಿದ ವೇದಿಕೆ ಕಾರ್ಯಕ್ರಮಕ್ಕೆ ತೆರಳಿದರು.

ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ .ಬಾಬು ಜಗಜೀವನ್ ರಾಮ್ ರವರ ಜಯಂತಿ ಕಾರ್ಯಕ್ರಮವನ್ನು ನಂಜನಗೂಡಿನ ಶಾಸಕರಾದ ದರ್ಶನ್ ಧ್ರುವನಾರಾಯಣ್ ವಿಧಾನಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತು ಡಾ .ತಿಮ್ಮಯ್ಯ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ .ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, 70ರ ದಶಕದಲ್ಲಿ ದೇಶದಲ್ಲಿ ಸಾಕಷ್ಟು ಅಸ್ಪೃಶ್ಯತೆ ಆಚರಣೆಯಲ್ಲಿತ್ತು. ಕುಡಿಯಲು ನೀರು ಸಿಗದ ಕಾಲಘಟ್ಟದಲ್ಲಿ ಶೋಷಿತರ ಪರವಾಗಿ ನಿಂತು ಧ್ವನಿ ಮಾಡಿ ರಾಜಕಾರಣದಲ್ಲಿ ಉತ್ತಮ ನಾಯಕನಾಗಿ ಭಾರತ ದೇಶದ ಉಪ ಪ್ರಧಾನಿಯಾಗುವುದು ಎಂದರೆ ಅದು ಸಾಮಾನ್ಯ ವಿಚಾರ ಅಲ್ಲ. ಬಾಬು ಜಗಜೀವನ್ ರಾಮ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಾಕಷ್ಟು ಜ್ವಾಲಂತ ಹೋರಾಟಗಳಿಗೆ ಪರಿಹಾರ ನೀಡಿದ ಮಹಾನ್ ನಾಯಕರಲ್ಲಿ ಜಗಜೀವನ್ ರಾಮ್ ಕೂಡ ಒಬ್ಬರು. ರಕ್ಷಣಾ ಸಚಿವರಾಗಿದಂತಹ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವುದರ ಜೊತೆಗೆ ಸೈನಿಕರಿಗೆ ಉತ್ತಮ ಬೆಂಬಲ ನೀಡಿದ ನಾಯಕ ಡಾ .ಬಾಬು ಜಗಜೀವನ್ ರಾಮ್ ಇಂತಹ ನಾಯಕರ ಜಯಂತಿ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ರಾಷ್ಟ್ರ ನಾಯಕ ಬಾಬು ಜಗಜೀವನ್ ರಾಮ್ ರವರು ಬರೋಬರಿ, 40 ವರ್ಷಗಳ ಕಾಲ ಸಚಿವರಾಗಿ ಸಂಸದರಾಗಿ ದೇಶದಲ್ಲಿ ಉತ್ತಮ ಆಡಳಿತ ನಡೆಸಿದ್ದಾರೆ.

ಬಿಹಾರ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಕಡು ಬಡತನವನ್ನು ಲೆಕ್ಕಿಸದೆ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ವಿದ್ಯಾರ್ಥಿ ದೆಸೆಯಲ್ಲಿ ಹೋರಾಟ ಮತ್ತು ಧ್ವನಿಯನ್ನು ಮಾಡುವುದರ ಮೂಲಕ ರಾಜಕಾರಣಕ್ಕೆ ಮುಂದಾಗಿ ದೇಶದಲ್ಲಿ ಶ್ರೀಮತಿ ಇಂದಿರಾಗಾಂಧಿ ಆಡಳಿತ ಅವಧಿಯಲ್ಲಿ ಸಚಿವರಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ದೇಶದಲ್ಲಿ ತಿನ್ನುವ ಆಹಾರಕ್ಕೆ ಸಂಕಷ್ಟ ಎದುರಾದಾಗ ಇಂತಹ ದುಸ್ಥಿತಿಯ ಪರಿಸ್ಥಿತಿಯನ್ನು ಎದುರಿಸಿ ಮೆಟ್ಟಿ ನಿಲ್ಲುವುದರ ಜೊತೆಗೆ ಹೊರದೇಶಗಳಿಗೆ ಸ್ವದೇಶಿ ಆಹಾರ ತಲುಪಿಸಲು ಡಾ. ಬಾಬು ಜಗಜೀವನ್ ರಾಮ್ ಯಶಸ್ವಿಯಾದರು. ಇಂತಹ ಮಹಾನ್ ನಾಯಕರ ತತ್ವ ಸಿದ್ಧಾಂತ ಮತ್ತು ಆದರ್ಶಗಳನ್ನು ಪಾಲಿಸಿ ದೇಶದಲ್ಲಿ ರಾಜ್ಯದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು‌ ಹೇಳಿದರು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮುಖ್ಯ ಭಾಷಣಕಾರರಾದ ಪ್ರಾಧ್ಯಾಪಕ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು, ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.