ನಂಜನಗೂಡು: ಹಲ್ಲರೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಇನ್ನು ಮೂರು ದಿನಗಳೊಳಗೆ ಬಂಧಿಸಬೇಕು ಇಲ್ಲದಿದ್ದಲ್ಲಿ ತಾಲ್ಲೂಕಿನಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ತಾಲ್ಲೂಕು ಆಡಳಿತಕ್ಕೆ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರಿಗೆ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ತಾಲ್ಲೂಕು ಆಡಳಿತ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ವಿರೋಧಿಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಮನವಿ ಪತ್ರ ಸಲ್ಲಿಸಿದರು.

ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್ ಮಾತನಾಡಿ, ಘಟನೆ ನಡೆದು ಒಂದು ವಾರ ಕಳೆಯುತ್ತಾ ಬಂದಿದ್ದರು ಇನ್ನೂ ಕೂಡ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಬಂಧಿಸುವಲ್ಲಿ ವಿಫಲವಾಗಿದೆ. ನಿಜವಾದ ಆರೋಪಿಗಳನ್ನು ಬಂಧಿಸಬೇಕು. ತಾಲ್ಲೂಕಿನಲ್ಲಿ ಜನರು ಸಂಘಟಕರನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ.

ಇಂತಹ ಅಪಮಾನ ನಡೆಯಲು ಪ್ರಮುಖವಾಗಿ ಪೊಲೀಸ್ ಇಲಾಖೆಯ ವೈಫಲ್ಯ ಕಾರಣವಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಸಿ ಕ್ಯಾಮೆರಾ ವಿಚಾರದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯ ವಿರುದ್ಧವೂ ಕ್ರಮ ಜರುಗಿಸಬೇಕು. ಇನ್ನು ಮೂರು ದಿನಗಳ ಒಳಗಾಗಿ ಕಿಡಿಗೇಡಿಗಳನ್ನು ಬಂಧಿಸದಿದ್ದರೆ ನಂಜನಗೂಡು ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ನಂತರ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಹಲ್ಲರೆ ಪ್ರಕರಣವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ತಾಲ್ಲೂಕು ಆಡಳಿತ ಮಲತಾಯಿ ಧೋರಣೆ ಮಾಡುತ್ತಿದೆ. ರಾಷ್ಟ್ರ ನಾಯಕರಿಗೆ ಅಪಮಾನವಾಗಿದ್ದರು ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಘಟನೆ ನಡೆದ 24 ಗಂಟೆಯ ಒಳಗೆ ಕಿಡಿಗೇಡಿಗಳನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಬಂಧಿಸಬೇಕಿತ್ತು. ಆದರೆ, ಏಳು ದಿನ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಇನ್ನು ಮೂರು ದಿನದ ಒಳಗೆ ಕಿಡಿಗೇಡಿಗಳನ್ನು ಬಂಧಿಸದಿದ್ದಲ್ಲಿ ತಾಲ್ಲೂಕಿನಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ. ಪ್ರತಿಭಟನೆ ಎದುರಿಸಲು ತಾಲ್ಲೂಕು ಆಡಳಿತ ಸಿದ್ದವಾಗಿರಿ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಡಿವೈಎಸ್ಪಿ ರಘು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಸುಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗು, ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಜಿಲ್ಲಾ ಸಂಯೋಜಕ ಕಾರ್ಯ ಬಸವಣ್ಣ, ಗೌರವಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್, ತಾಲ್ಲೂಕು ಸಂಯೋಜಕ ಶಿವರಾಜು, ಪುಟ್ಟಸ್ವಾಮಿ, ಬಸವರಾಜು, ಮಹದೇವಸ್ವಾಮಿ, ಮಹೇಶ್, ಉಪ್ಪಿನಹಳ್ಳಿ ನಾರಾಯಣ್ ಸೇರಿದಂತೆ ಹಲವರು ಭಾಗವಹಿಸಿದ್ದರು.