ನಂಜನಗೂಡು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ತಾಲ್ಲೂಕಿನಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಸದಸ್ಯರ ಸಹಕಾರ ಅತ್ಯಗತ್ಯ ಎಂದು ಮಲ್ಲೂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ರೋಹಿಣಿ ಪುಟ್ಟರಾಜು ಹೇಳಿದರು.

ನಂಜನಗೂಡು ತಾಲ್ಲೂಕಿನ ಮಲ್ಲೂಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೊದಲನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನೂತನವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ.

ಈಗಾಗಲೇ ಸಂಘದಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯ ನೀಡುತ್ತಿದ್ದು, ಸರಿಯಾಗಿ ವಸೂಲಾತಿಯೂ ಆಗುತ್ತಿದೆ. ಇನ್ನೂ ಹೆಚ್ಚು ಜನರಿಗೆ ಸೌಲಭ್ಯ ದೊರೆಯುತ್ತಿವೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಲು ಮುಂದಾಗುತ್ತೇವೆ. ಶೇರುದಾರರು ಕಡಿಮೆ ಇರುವುದರಿಂದ ಸಂಘದಲ್ಲಿ ಲಾಭ ಬರುತ್ತಿಲ್ಲ.

ಸಂಘಕ್ಕೆ 13 ಸಾವಿರ ನಷ್ಟ ಉಂಟಾಗಿದೆ. 81 ಲಕ್ಷ ಸಾಲವನ್ನು ನೀಡಿದ್ದೇವೆ. ಸಂಘದ ಸದಸ್ಯರು ಸಹಕರಿಸಿದರೆ ತಾಲ್ಲೂಕಿನಲ್ಲಿ ಉತ್ತಮ ಸಹಕಾರ ಸಂಘವಾಗಿ ಮಾಡಬಹುದು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಷೇರುದಾರರು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಸಹಕಾರ ಸಂಘದ ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಬಿ.ಸಿ ಶಿವಲಿಂಗೇಗೌಡ ಮಾತನಾಡಿ, ಬಿಳಿಗೆರೆ, ತಗಡೂರು, ದೇವನೂರು ಮೂರು ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಲ್ಲೂಪುರ ಸೇರಿಕೊಂಡಿತು. 2024 ರಿಂದ ಮಲ್ಲೂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವಾಗಿ ಪ್ರಾರಂಭಗೊಂಡಿದೆ. ಈ ವರ್ಷದಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಮತ್ತು ಷೇರುದಾರರಿಗೆ ಸಾಲ ಸೌಲಭ್ಯಗಳನ್ನು ನೀಡಲು ತೀರ್ಮಾನಿಸಲಾಗಿದೆ. ಬೆಳೆ ಸಾಲ, ಅಲ್ಪಾವಧಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

2024-25 ನೇ ಸಾಲಿಗೆ ಆಡಿಟ್ ಆದ ಜಮಾ ಖರ್ಚು ಲಾಭ ನಷ್ಟ ವ್ಯಾಪಾರದ ತಖ್ತೆ ಮತ್ತು ಆಸ್ತಿ ಜವಾಬ್ದಾರಿಗಳನ್ನು ಓದಿ ಅಂಗೀಕರಿಸಲಾಯಿತು. ಲೆಕ್ಕ ಪರಿಶೋಧನೆ ಮಾಡಿಸಲು ನೇಮಕ ಮಾಡಿಕೊಳ್ಳುವ ವಿಚಾರವಾಗಿ ಚರ್ಚೆ ನಡೆಸಲಾಯಿತು. ಮುಂದಿನ ವರ್ಷದ ಬಜೆಟನ್ನು 11.50 ಲಕ್ಷ ರೂ.ಗಳ ಆಯವ್ಯಯ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರ ಸಂಘದ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಿ.ಸಿ ಶಿವಲಿಂಗೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ರೋಹಿಣಿ ಪುಟ್ಟರಾಜು, ಉಪಾಧ್ಯಕ್ಷ ಎಂ. ವಿಷ್ಣುಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಸುರೇಶ್, ನಿರ್ದೇಶಕರಾದ ಶಿವಶಂಕರ, ಸೋಮು, ಶಿವಣ್ಣ, ರವಿ, ಜನಾರ್ದನ್, ಲೂಕ, ಮಹೇಶ್, ಅಂಕಪ್ಪ, ಚಿಕ್ಕ ಸ್ವಾಮಿ, ಲಕ್ಷ್ಮಿ ಗುರುಸಿದ್ಧೇಗೌಡ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.