ನಂಜನಗೂಡು: ಶಾಲೆಯ ಪರವಾನಗಿ ನವೀಕರಣಗೊಳಿಸದೆ ತರಗತಿಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಹುಣಸನಾಳು ಗ್ರಾಮದ ಬಳಿ ಇರುವ ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಗುರುವಾರ ಪೋಷಕರು ರೊಚ್ಚಿಗೆದ್ದು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಸುಮಾರು 283ಕ್ಕೂ ಹೆಚ್ಚು ಮಕ್ಕಳು 1 ರಿಂದ 5ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡಲಾಗುತ್ತಿದೆ. ಅನುಮತಿಯ ಅವಧಿ ಮುಗಿದು ವರ್ಷ ಕಳೆದರೂ ಅದನ್ನು ನವೀಕರಣಗೊಳಿಸದೆ ಶಾಲೆಯನ್ನು ನಡೆಸುತ್ತಿದ್ದಾರೆ. ಜೊತೆಗೆ 6ನೇ ತರಗತಿಗಳನ್ನು ನಡೆಸಲಾಗುತ್ತಿದ್ದು, ಏಳು ಮತ್ತು ಎಂಟನೇ ತರಗತಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರ್ಹತೆ ಇಲ್ಲದ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೀರಿ ಎಂದು ಗಂಭೀರವಾಗಿ ಆರೋಪಿಸಿದರು.
ರಾಜ್ಯ ಸರ್ಕಾರದ ಪಠ್ಯಕ್ರಮಕ್ಕೆ ಅನುಮತಿ ಪಡೆದು, ಕೇಂದ್ರ ಸರ್ಕಾರದ ಪಠ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಇದಕ್ಕೆ ದುಬಾರಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ. ಈ ಶುಲ್ಕವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಬದುಕಿಗೆ ದಾರಿಯಾಗುತ್ತಾರೆ ಎಂಬ ಅಪಾರ ನಂಬಿಕೆಯಿಂದ ಸರ್ಕಾರಿ ಶಾಲೆಗಳನ್ನ ತ್ಯಜಿಸಿ, ಸಾಲ ಸೋಲ ಮಾಡಿ ಎಷ್ಟೇ ದುಬಾರಿ ಶುಲ್ಕ ಕೇಳಿದರೂ ಅದನ್ನು ಪಾವತಿ ಮಾಡಿದ್ದೇವೆ. ಆದರೆ, ಶಿಕ್ಷಣ ಇಲಾಖೆಯಿಂದ ಕಳೆದ ವರ್ಷ ಅನುಮತಿಯನ್ನು ಪಡೆಯದಿಲ್ಲ.
ನಮ್ಮ ಮಕ್ಕಳ ಭವಿಷ್ಯದ ಮೇಲೆ ಶಿಕ್ಷಣ ಇಲಾಖೆ ಮತ್ತು ಶಾಲಾ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ, ಜೊತೆಗೆ ಸರ್ಕಾರದ ಶಾಲೆಗಳಲ್ಲಿ ನಡೆಸುವ ಪಾಠ ಪ್ರವಚನವನ್ನು ಕೂಡ ಇಲ್ಲಿ ನಡೆಸುತ್ತಿಲ್ಲ, ಹಾಗೂ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಇಂಗ್ಲಿಷ್ ಕಲಿಯುವಷ್ಟು ಇಲ್ಲಿ ಕಲಿಸುತ್ತಿಲ್ಲ ಎಂದು ಆರೋಪಿಸಿ ಶಾಲಾ ಆಡಳಿತ ಮಂಡಳಿಯ ವಿರುದ್ಧ ನೂರಾರು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಿಇಓ ಭೇಟಿ: ಪೋಷಕರ ಸಭೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಭೇಟಿ ನೀಡಿ ಪೋಷಕರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ನೆರೆದಿದ್ದ ನೂರಾರು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಕಳೆದ 2024-25ನೇ ಸಾಲಿನ ಶಾಲೆ ಸರ್ಕಾರದಿಂದ ಪರವಾನಗಗಿ ಯನ್ನು ನವೀಕರಣ ಮಾಡದೆ ಶಾಲೆಯನ್ನು ನಡೆಸಲಾಗಿದೆ ಜೊತೆಗೆ ಪ್ರಸಕ್ತ ಸಾಲಿನ ತರಗತಿಗಳು ಪ್ರಾರಂಭಗೊಂಡು ಐದು ತಿಂಗಳು ಕಳೆದಿದ್ದರೂ ಕೂಡ ಪರವಾನಗಿ ನವೀಕರಣ ಮಾಡಿಲ್ಲ ಮಾಡಿಲ್ಲ. ಈ ಬಗ್ಗೆ ನಿಮ್ಮ ಗಮನಕ್ಕೆ ಬಂದಿದ್ದರೂ ಯಾಕೇ ಕ್ರಮ ಕೈಗೊಂಡಿಲ್ಲ.
ಖಾಸಗಿ ಶಾಲೆಗಳನ್ನು ಪ್ರೋತ್ಸಾಹಿಸಿ ಸರ್ಕಾರಿ ಶಾಲೆಗಳನ್ನು ಕಡೆಗಣಿಸುತ್ತಿದ್ದೀರಿ ಎಂದು ಕಿಡಿಕಾರಿದರು. ಪೋಷಕರು ಕೇಳಿದ ಪ್ರಶ್ನೆಗೆ ಉತ್ತರಿಸದೆ ಬಿಇಓ ತಡವರಿಸಿದರು. ಸ್ಥಳಕ್ಕೆ ಡಿಡಿಪಿಐ ರವರು ಬರುವಂತೆ ಪಟ್ಟು ಹಿಡಿದರು. ಪರವಾನಗಿ ಜೊತೆಗೆ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಹಲವು ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ.
ಶಾಲಾ ಕಟ್ಟಡ ಪೂರ್ಣಗೊಳ್ಳದೆ ಶಾಲೆಯನ್ನು ಪ್ರಾರಂಭ ಮಾಡುವಂತಿಲ್ಲ. ಈಗಾಗಲೇ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದರೂ ಶಾಲೆಯನ್ನು ನಡೆಸುತ್ತಿದ್ದೀರಿ, ಇವರಿಗೆ ಅನುಮತಿ ಹೇಗೆ ಕೊಟ್ಟಿದ್ದಾರೆ. ಅಲ್ಲದೆ ಬಸ್ ಶುಲ್ಕ ಒಂದು ದಿನ ಕಟ್ಟುವುದು ತಡವಾದರೂ ಮಕ್ಕಳನ್ನು ಅಲ್ಲೆಯೇ ಬಿಟ್ಟು ಚಾಲಕರು ತೆರಳುತ್ತಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಕೇಳಿದರೆ ಉಡಾಫೆಯಿಂದ ಉತ್ತರಿಸುತ್ತಾರೆ ಎಂದು ಆರೋಪಿಸಿದರು.
ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಮಹೇಶ್ ಮಾತನಾಡಿ, ಕಳೆದ ವರ್ಷದಿಂದಲೂ ಸರ್ಕಾರದ ಅನುಮತಿಯನ್ನು ನವೀಕರಣ ಮಾಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಜೊತೆಗೆ ಶಾಲಾ ಆಡಳಿತ ಮಂಡಳಿಗೂ ನೋಟಿಸ್ ನೀಡಿದ್ದೇವೆ. ಅವರು ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ. ಈಗ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಮಕ್ಕಳಿಗೆ ನೀಡುವಂತೆ ನಿರ್ದೇಶನ ನೀಡಿದ್ದೇನೆ.
ಶುಲ್ಕವನ್ನು ಕೊಡದಿದ್ದರೂ ಮಕ್ಕಳನ್ನು ಕಡ್ಡಾಯವಾಗಿ ವಾಹನ ಚಾಲಕರು ಕರೆ ತರಬೇಕು. ಮಕ್ಕಳಿಗೆ ಯಾವುದೇ ರೀತಿ ತೊಂದರೆಯಾಗದಂತೆ, ಕ್ರಮವಹಿಸುವಂತೆ ಸೂಚಿಸಿದ್ದೇವೆ. ಅವರು ನವೀಕರಣ ಮಾಡದೆ ಇದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದೇ ತಿಂಗಳ 25ರಂದು ಡಿಡಿಪಿಐ ಅವರೊಂದಿಗೆ ಶಾಲೆಯಲ್ಲಿ ಸಭೆಯನ್ನು ನಡೆಸಿಕೊಡುತ್ತೇನೆ ಎಂದು ಪೋಷಕರಿಗೆ ಭರವಸೆ ನೀಡಿದ ನಂತರ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಪೋಷಕರು ಹಾಜರಿದ್ದರು.

