ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿಯವರ ಅಂಧಕಾಸುರನ ವಧೆ ಕಾರ್ಯಕ್ರಮ ಶುಕ್ರವಾರ ರಾತ್ರಿ ಯಾವುದೇ ಗೊಂದಲವಿಲ್ಲದೆ ನಿರ್ವಿಘ್ನವಾಗಿ ನೆರವೇರಿತು.
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವತಿಯಿಂದ ನಗರದ ರಾಕ್ಷಸ ಮಂಟಪ ವೃತ್ತದ ಬಳಿ ಅಂಧಕಾಸುರನ ಚಿತ್ರವನ್ನು ರಂಗೋಲಿಯಲ್ಲಿ ಬರೆಯಲಾಗಿತ್ತು. ಅಲ್ಲದೆ ಬೃಹತ್ ಗಾತ್ರದ ಅಂಧಕಾಸುರನ ಚಿತ್ರಪಟವನ್ನು ನಿರ್ಮಿಸಲಾಗಿತ್ತು. ಮೊದಲಿಗೆ ದೇವಾಲಯದ ಆಗಮಿಕ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಅಂಧಕಾಸುರನ ರಂಗೋಲಿಯಲ್ಲಿ ಬರೆಯಲಾಗಿದ್ದ ಚಿತ್ರಕ್ಕೆ ಬಲಿ ಪೂಜೆ ನೆರವೇರಿಸಿ ಜೀವ ಕಳೆಯನ್ನು ತುಂಬಲಾಯಿತು.
ಬಳಿಕ ಶ್ರೀಕಂಠೇಶ್ವರ ದೇವಾಲಯದಿಂದ ನಟರಾಜ ಅವತಾರದ ಉತ್ಸವ ಮೂರ್ತಿಯನ್ನು ದೇವಾಲಯದ ಅರ್ಚಕರ ತಂಡ ಹೂವಿನ ಪಲ್ಲಕ್ಕಿಯೊಡನೆ ಮೆರವಣಿಗೆ ಮೂಲಕ ಕರೆತರಲಾಯಿತು. ರಾಕ್ಷಸ ಮಂಟಪ ಬಳಿ ಬರೆಯಲಾಗಿದ್ದ ಅಂಧಕಾಸುರನ ರಂಗೋಲಿಯ ಭಾವಚಿತ್ರವನ್ನು ಉತ್ಸವ ಮೂರ್ತಿಯನ್ನು ಹೊತ್ತಿದ್ದ ಅರ್ಚಕರ ತಂಡ ತುಳಿದು ರಂಗೋಲಿಯನ್ನು ಅಳಿಸುವ ಮೂಲಕ ಸಂಹಾರ ಕಾರ್ಯಕ್ರಮ ನೆರವೇರಿತು.
ಈ ವೇಳೆಗೆ ಅಂಧಕಾಸುರನ ಬೃಹತ್ ಗಾತ್ರದ ಭಾವಚಿತ್ರವನ್ನು ಕೆಳಗೆ ಇಳಿಸುವ ಮೂಲಕ ಅಂಧಕಾಸುರನ ವಧೆಯ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನಿರ್ವಿಘ್ನವಾಗಿ ನೆರವೇರಿಸಲಾಯಿತು.ಈ ವೇಳೆ ನೆರೆದಿದ್ದ ಭಕ್ತಾಧಿಗಳು ಜೈ ಶ್ರೀಕಂಠೇಶ್ವರ, ಜೈ ಪಾರ್ವತಿ ದೇವಿ, ಎಂದು ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೂಗಿ, ಅಂಧಕಾಸುರನ ರಂಗೋಲಿಯ ಚಿತ್ರವನ್ನು ತುಳಿದು ಕುಣಿದು ಕುಪ್ಪಳಿಸಿದರಲ್ಲದೆ, ದೇವರ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡು, ಇಷ್ಟಾರ್ಥಗಳನ್ನು ನೆರವೇರಿಸುವಂತೆ ಹರಕ್ಕೆ ಕಟ್ಟಿ ಭಕ್ತಿ ಮೆರೆದರು.
ನಂತರ ಅಂಧಕಾಸುರನ ವಧೆಗಾಗಿ ನಟರಾಜನ ರೌದ್ರಾವತಾರದಲ್ಲಿ ಕಾಣಿಸಿಕೊಂಡ ಶ್ರೀಕಂಠೇಶ್ವರಸ್ವಾಮಿವರನ್ನು ಪಾರ್ವತಿ ದೇವಿಯ ಉತ್ಸವ ಮೂರ್ತಿಯನ್ನು ತಂದು ಸಮಾಧಾನಪಡಿಸಿ ಪೂಜೆ ನೆರವೇರಿಸಿ ದೇವಾಲಯದ ಕಡೆಗೆ ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ದೇವಾಲಯದಲ್ಲಿ ಧಾರ್ಮಿಕ ಪೂಜೆ ಕಾರ್ಯಗಳನ್ನು ನೆರವೇರಿಸುವ ಮೂಲಕ ಅಂಧಕಾಸುರ ವಧೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

