ನಂಜನಗೂಡು: ಕಲ್ಯಾಣ ಮಂಟಪದ ಆವರಣದಲ್ಲಿ ಅನಧಿಕೃತವಾಗಿ ಬಾರ್ ಅಂಡ್ ರೆಸ್ಟೋರೆಂಟ್ ತಲೆ ಎತ್ತಿದೆ. ಹೋಟೆಲ್ ಮುಂಭಾಗದಲ್ಲಿ ಶುದ್ಧ ಸಸ್ಯಹಾರಿ ಎಂದು ನಾಮಫಲಕ ಅಳವಡಿಸಿದ್ದಾರೆ. ಆದರೆ, ಒಳಗಡೆ ತೆರಳಿದರೆ ಸಾಕು ಬಾರ್ ಕಾಣಿಸುತ್ತದೆ.

ಹೆದ್ದಾರಿಯ ಮುಂಭಾಗದಲ್ಲಿ ಎಸ್ ಆರ್ ಕೆ ಹೋಟೆಲ್ ಎಂದು ನಾಮಫಲಕ ಅಳವಡಿಸಿ, ಒಳಗಡೆ ಮದ್ಯೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ ಅನಧಿಕೃತ ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸುವಂತೆ ಸಂಘಟಕರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಅಬಕಾರಿ ಇಲಾಖೆಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಎಸ್.ಎಂ.ಪಿ ಕನ್ವೆನ್ಷನ್ ಹಾಲ್ ಕಲ್ಯಾಣ ಮಂಟಪದ ಬಾರ್ ಅಂಡ್ ರೆಸ್ಟೋರೆಂಟ್ ಗೆ ಹೊಂದಿಕೊಂಡಂತೆ ಇರುವ ಗೋಡೆ ಪಕ್ಕದಲ್ಲೇ ಇದ್ದು ಕಿಟಕಿ ಮೂಲಕ ಕಲ್ಯಾಣ ಮಂಟಪಕ್ಕೆ ಅಕ್ರಮವಾಗಿ ಮದ್ಯೆ ಸರಬರಾಜು ಮಾಡುತ್ತಿದ್ದಾರೆಂದು ಸಂಘಟಕರು ದೂರಿನಲ್ಲಿ ಆರೋಪಿಸಿದ್ದಾರೆ.

ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗವೇ ಗೌತಮ ಬುದ್ಧನ ಪ್ರತಿಮೆ ನಿರ್ಮಿಸಿ ಅಗೌರವ ಸೂಚಿಸಲಾಗಿದೆ. ಬಾರ್ ಎದುರು ಬುದ್ಧನ ಪ್ರತಿಮೆಗೆ ಅಪಚಾರ ಮಾಡಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್ ಗೆ ನೀಡಿದ ಅನುಮತಿ ಅವಧಿ ಪೂರ್ಣಗೊಂಡಿದ್ದರೂ ವಹಿವಾಟು ನಡೆಸುತ್ತಿರುವುದಾಗಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಅಬಕಾರಿ ಇಲಾಖೆಗೆ ಲಿಖಿತ ದೂರು ನೀಡಿದ್ದಾರೆ.

ಬಾರ್ ಸುತ್ತಮುತ್ತ ಬದನವಾಳು, ಮಹದೇವ ನಗರ, ಚಿನ್ನದ ಗುಡಿಹುಂಡಿ, ವೀರೇಗೌಡನ ಹುಂಡಿ, ವೀರೇದೇವನಪುರ, ಕೊಡಿ ನರಸೀಪುರ ಗ್ರಾಮಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಾರೆ. ಶಾಲೆ, ಮಸೀದಿ, ದೇವಸ್ಥಾನಗಳಿವೆ. ಬಾರ್ ಅಂಡ್ ರೆಸ್ಟೋರೆಂಟ್ ಸೂಕ್ಷ್ಮ ಪ್ರದೇಶವಾಗಿದ್ದು, ಹಿಂದೂ ಮುಸ್ಲಿಂ ಗಲಾಟೆ ಆಗುವ ಸಂಭವ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಬಾರ್ ತೆರೆಯಲು ಅಬಕಾರಿ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಕಳೆದ ಹಲವಾರು ದಿನಗಳಿಂದ ಎಸ್.ಆರ್.ಕೆ ಹೋಟೆಲ್ ಹೆಸರಲ್ಲಿ ಮದ್ಯೆ ಮಾರಾಟ ನಡೆಯುತ್ತಿದೆ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಬಾರ್ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಮುಚ್ಚಬೇಕು ಇಲ್ಲವಾದಲ್ಲಿ ಗ್ರಾಮಸ್ಥರ ಜೊತೆಗೂಡಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.