ನಂಜನಗೂಡು: ಗಂಟೆ ಮಧ್ಯಾಹ್ನ 12 ಆದರೂ ಕಛೇರಿಯ ಬಾಗಿಲು ಮಾತ್ರ ತೆರೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿರುವ ಜನನ ಮತ್ತು ಮರಣ ಶಾಖೆಯಲ್ಲಿ ಇಂದು ಬುಧವಾರ ಮಧ್ಯಾಹ್ನವಾದರೂ ಕಛೇರಿಯ ಬಾಗಿಲು ತೆರೆಯದೆ ಬೀಗ ಜಡಿಯಲಾಗಿತ್ತು.
ಬೆಳಗ್ಗೆಯಿಂದ ಸಾರ್ವಜನಿಕರು ಕಛೇರಿಯತ್ತ ಧಾವಿಸಿ ಕಾದು ಕುಳಿತಿದ್ದಾರೆ. ಯಾವೊಬ್ಬ ಅಧಿಕಾರಿಯು ಬಾರದೆ ಕಚೇರಿಗೆ ಬೀಗ ಹಾಕಲಾಗಿದ್ದು, ಬಾಗಿಲು ಹಾಕಿರುವುದನ್ನು ನೋಡಿ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳುತ್ತಿದ್ದರು. ಜನನ ಮತ್ತು ಮರಣ ಪತ್ರವನ್ನು ಪಡೆದುಕೊಳ್ಳಲು ಜನರು ಪರಿತಪಿಸುತ್ತಿದ್ದರು.

ಸ್ಥಳಕ್ಕೆ ತೆರಳಿದ ನ್ಯೂಸ್ ಕರ್ನಾಟಕ ವಾಹಿನಿ, ಕಛೇರಿಗೆ ಬೀಗ ಹಾಕಿರುವುದನ್ನು ಚಿತ್ರಿಕರಿಸಲಾಗುತ್ತಿತ್ತು. ನ್ಯೂಸ್ ಕರ್ನಾಟಕ ಕ್ಯಾಮೆರಾ ಕಂಡು ಎಚ್ಚೆತ್ತುಕೊಂಡ ಸಿಬ್ಬಂದಿಗಳು ಮಧ್ಯಾಹ್ನ 12:15 ಕ್ಕೆ ಕಛೇರಿಯನ್ನು ತೆರೆದಿದ್ದಾರೆ. ತಾಲ್ಲೂಕು ಆಡಳಿತದ ವೈಫಲ್ಯ ಎದ್ದು ಕಾಣುತ್ತಿದ್ದು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.
ಜನನ ಮತ್ತು ಮರಣ ಶಾಖೆಯ ಅಧಿಕಾರಿಗಳು ಕಛೇರಿಯನ್ನು ತೆರೆಯದೆ ಮದುವೆಗೆ ತೆರಳಿದ್ದಾರಂತೆ. ಎಲ್ಲರೂ ಮದುವೆಗೆ ಊಟಕ್ಕೆ ಹೋಗಿದ್ದಾರೆ ಎಂದು ಸಾರ್ವಜನಿಕರಿಗೆ ಹೇಳುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಕೆಲಸದಲ್ಲಿರುವ ಅಧಿಕಾರಿಗಳು ಕೆಲಸದ ಸಮಯದಲ್ಲಿ ಕಛೇರಿಗೆ ಬೀಗ ಹಾಕಿ ಮದುವೆಗೆ ಹೋಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

