ನಂಜನಗೂಡು: ಮೈಸೂರು ಮತ್ತು ಚಾಮರಾಜನಗರ ಭಾಗಗಳಲ್ಲಿ ದಿ.ವಿ. ಶ್ರೀನಿವಾಸ್ ಪ್ರಸಾದ್ ರವರು ಸತತ 50 ವರ್ಷಗಳ ಕಾಲ ರಾಜಕಾರಣ ಮಾಡಿ ಪ್ರಬುದ್ಧ ರಾಜಕಾರಣಿಯಾಗಿದ್ದಾರೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಬಣ್ಣಿಸಿದರು.

ನಂಜನಗೂಡು ನಗರದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ವಿ.ಶ್ರೀನಿವಾಸ ಪ್ರಸಾದ್ ರವರ ಅಭಿಮಾನಿಗಳ ಬಳಗ ನಂಜನಗೂಡು ವತಿಯಿಂದ ಸ್ವಾಭಿಮಾನಿ ಸಂಪದ ಎಂಬ ಶೀರ್ಷಿಕೆಯಲ್ಲಿ 78ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಜ್ಯೋತಿ ಬೆಳಗಿಸಿ, ಶ್ರೀನಿವಾಸ್ ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು,  ಶ್ರೀನಿವಾಸ್ ಪ್ರಸಾದ್ ರವರು ದೇಶದಲ್ಲಿ ಹಲವು ನಾಯಕರ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಅಂಬೇಡ್ಕರ್ ರವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುತ್ತಿದ್ದರು. ಅವರ ಮನಸ್ಸಿನ ತುಡಿತವನ್ನು ಹೇಳಿಕೊಳ್ಳುತ್ತಿದ್ದರು.

ನೇರವಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಎಲ್ಲಾ ಪಕ್ಷಗಳ ರಾಜಕಾರಣಿಗಳ ಜೊತೆಯಲ್ಲಿ ಸಂಬಂಧವನ್ನು ಹೊಂದಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ರಾಜಕೀಯವನ್ನು ವಿಶ್ಲೇಷಣೆ ಮಾಡುತ್ತಿದ್ದರು. ರಾಜಕೀಯ ವ್ಯವಸ್ಥೆಯಲ್ಲಿ ಯಾವ ಸಮಾಜದಲ್ಲಿಯೂ ತಲ್ಲಣಗಳು ಬರಬಾರದು ಎನ್ನುತ್ತಿದ್ದರು . ಲೋಕಸಭಾ ಸದಸ್ಯರಾಗಿ ಶಾಸಕರಾಗಿ, ಉತ್ತಮ ಕೆಲಸ ಮಾಡಿದ್ದಾರೆ. ತತ್ವ ಬದ್ಧ ರಾಜಕಾರಣಿಯಾಗಿ ಸ್ವಾಭಿಮಾನಕ್ಕೆ ಧಕ್ಕೆ ಮಾಡದ ರೀತಿಯಲ್ಲಿ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದರು.

ಅವರ ಕ್ಷೇತ್ರದಲ್ಲಿ ಯಾವುದೇ ಕೋಮು ಗಲಭೆ ನಡೆಯದಂತೆ ಎಚ್ಚರವಹಿಸಿಕೊಂಡಿದ್ದರು. ಇಂತಹ ಅಪರೂಪದ ರಾಜಕಾರಣಿ ಸಿಗುವುದು ಬಲು ಅಪರೂಪ. ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಶ್ರೀನಿವಾಸ್ ಪ್ರಸಾದ್ ರವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಶ್ರೀನಿವಾಸ್ ಪ್ರಸಾದ್ ರವರ ಧರ್ಮಪತ್ನಿ ಭಾಗ್ಯಲಕ್ಷ್ಮೀ, ಮಾಜಿ ಶಾಸಕ ಬಿ.  ಹರ್ಷವರ್ಧನ್, ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಜಿ.ಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ, ಮಾಜಿ ತಾ.ಪಂ ಸದಸ್ಯ ಬದನವಾಳು ರಾಮು, ಹೆಮ್ಮರಗಾಲ ಸೋಮಣ್ಣ ಸೇರಿದಂತೆ ವಿ.ಶ್ರೀನಿವಾಸ್ ಪ್ರಸಾದ್ ರವರ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.