ನಂಜನಗೂಡು: ಅಂಬೇಡ್ಕರ್ ಭವನ ಜಾಗದ ವಿವಾದ ಇದೀಗ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ಕೂಡಲೇ ತಹಶೀಲ್ದಾರ್ ಮಧ್ಯೆ ಪ್ರವೇಶಿಸಿ ವಿವಾದವನ್ನು ಇತ್ಯರ್ಥ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಪಿ.ಮರಹಳ್ಳಿ ಗ್ರಾಮದಲ್ಲಿ ಇಂತಹ ಬೆಳವಣಿಗೆ ಆಗಿದೆ. ಆಸ್ತಿ ನಂ.582 ರಲ್ಲಿ 50*40 ವಿಸ್ತೀರ್ಣದ ಜಾಗವನ್ನು ಸರ್ಕಾರ ಅಂಬೇಡ್ಕರ್ ಸಮುದಾಯ ಭವನಕ್ಕಾಗಿ ನೀಡಿದೆ. ಇಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ಸಮುದಾಯ ಭವನ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

ಇದಕ್ಕಾಗಿ ಸರ್ಕಾರ 20 ಲಕ್ಷ ರೂ‌ . ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ, ಪುಷ್ಪ ಎಂಬುವರು 10 ಅಡಿ ಜಾಗ ನಮ್ಮದೆಂದು ತಕರಾರು ಸಲ್ಲಿಸಿ ನ್ಯಾಯಾಲಯದಿಂದ ನಿರ್ಮಾಣ ಕಾರ್ಯಕ್ಕೆ ತಡೆಯಾಜ್ಞೆ ತಂದಿದ್ದಾರೆ. ಪುಷ್ಪ ರವರು ಅಕ್ರಮವಾಗಿ 10 ಅಡಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆಂದು ಗ್ರಾಮಸ್ಥರ ಆರೋಪವಾಗಿದೆ.

ಒಟ್ಟಾರೆ 10 ಅಡಿ ಜಾಗ ವಿವಾದಕ್ಕೆ ಕಾರಣವಾಗಿದೆ. ಭವನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ರವರು ಮಧ್ಯೆ ಪ್ರವೇಶಿಸಿ ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.