ಮೈಸೂರು: ಜಿಲ್ಲೆಯ ನಂಜನಗೂಡಿನಲ್ಲಿ ಏಪ್ರಿಲ್ 9ರಂದು ಪಂಚಮಹಾರಥೋತ್ಸವ ನಡೆಯುತ್ತಿದ್ದು, ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಥೋತ್ಸವದ ಸಂದರ್ಭ ಲಕ್ಷಾಂತರ ಭಕ್ತರು ಭಾಗವಹಿಸುತ್ತಿರುವುದರಿಂದಾಗಿ ಯಾವುದೇ ತೊಂದರೆಗಳು ಆಗದಂತೆ ನಿಗಾವಹಿಸಲಾಗುತ್ತಿದೆ. ದೇಗುಲ ಸೇರಿದಂತೆ ಇಡೀ ನಂಜನಗೂಡಿನಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆಯಿಂದಲೂ ಭಕ್ತರು ಆಗಮಿಸುತ್ತಿದ್ದು, ಎಲ್ಲೆಂದರಲ್ಲಿ ಜನರಿಂದ ತುಂಬಿ ಹೋಗಿದೆ.
ಜಿಲ್ಲಾಡಳಿತ, ತಾಲೂಕು ಆಡಳಿತ, ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಸೇರಿದಂತೆ ಎಲ್ಲರೂ ನಂಜನಗೂಡಿನತ್ತ ನಿಗಾವಹಿಸಿದ್ದು ರಥೋತ್ಸವ ಯಶಸ್ವಿಯಾಗಿ ನಡೆಯಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಥಗಳ ಸಿದ್ಧತೆಯನ್ನು ಒಂದೆಡೆ ಮಾಡಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ.
ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಸಿಸಿ ಟಿ ವಿ ಕ್ಯಾಮರಾಗಳನ್ನು ಅಳವಡಿಸಿದೆ. ಜತೆಗೆ ತಾತ್ಕಾಲಿಕ ವಾಚ್ ಟವರ್ ಗಳ ನಿರ್ಮಾಣ, ಸುಗಮ ವಾಹನ ಸಂಚಾರಕ್ಕೆ ಬ್ಯಾರಿಕೆಡಿಂಗ್ ವ್ಯವಸ್ಥೆ, ಮಾಹಿತಿ ಫಲಕಗಳು ಹಾಗೂ ಸ್ವಾಗತ ಕಮಾನು ಅಳವಡಿಕೆ ಮಾಡಿದ್ದಲ್ಲದೆ, ರಥಗಳು ಚಲಿಸುವ ರಸ್ತೆಯಲ್ಲಿ ಅಡ್ಡಲಾಗಿ ಇರುವ ವಿದ್ಯುತ್ ತಂತಿಗಳನ್ನು ತೆಗೆದು, ರಥೋತ್ಸವ ಮುಗಿದ ನಂತರ ಪುನರ್ ಜೋಡಣೆ ಮಾಡಲು ಸಿದ್ಧತೆ ಮಾಡಿದೆ.
ಅಲ್ಲದೆ ರಥೋತ್ಸವ ಮತ್ತು ತೆಪ್ಪೋತ್ಸವ ನಡೆಯುವ ದಿನಗಳಂದು ಸೆಸ್ಕಾಂನವರು ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುಸಜ್ಜಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ನೀರು,ಶೌಚಾಲಯದ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ.
ಏಪ್ರಿಲ್ 11 ರಂದು ತೆಪ್ಪೋತ್ಸವ ನಡೆಯಲಿದ್ದು ಇದಕ್ಕೂ ತಯಾರಿ ಮಾಡಿಕೊಳ್ಳಲಾಗಿದೆ. ತೆಪ್ಪೋತ್ಸವ ದಿನದಂದು ಕಪಿಲಾ ನದಿ ತೀರದಲ್ಲಿ ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ಮುಳುಗು ತಜ್ಞರೊಂದಿಗೆ ಬೋಟ್ ಗಳ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೆ ನಿಗಾ ವಹಿಸಲಾಗಿದೆ. ವಾಹನಗಳ ನಿಲುಗಡೆಗೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ರಥೋತ್ಸವಕ್ಕೆ ಬರುವ ಭಕ್ತರಿಗೆ ನೀರಿನ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

