ನಂಜನಗೂಡು: ಈ ವರ್ಷ ಸರ್ಕಾರದಿಂದ ಕೇವಲ ಐದು ಕೆಜಿ ಅಕ್ಕಿ ವಿತರಣೆ ಹಿನ್ನೆಲೆ ಲಾಭಾಂಶದಲ್ಲಿ ಕಡಿಮೆಯಾಗಿ ಸಂಘ ನಷ್ಟಕ್ಕೆ ಬಂದಿದೆ. ಪ್ರಸ್ತುತ ಸರ್ಕಾರ 10 ಕೆಜಿ ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಮುಂದಿನ ವರ್ಷ ಸಂಘ ಲಾಭಗಳಿಸಲಿದೆ ಎಂದು ಅಧ್ಯಕ್ಷ ಕುರಹಟ್ಟಿ ಮಹೇಶ್ ತಿಳಿಸಿದರು.
ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ 2024- 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷನಾಗಿ 13 ವರ್ಷಗಳಿಂದ ವಾರ್ಷಿಕ ಮಹಾಸಭೆ ನಡೆಸಲು ಸರ್ವ ಸದಸ್ಯರು ಅವಕಾಶ ನೀಡಿದ್ದೀರಿ. ಮೂರು ಬಾರಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದೀರಿ. ನನ್ನ ಅವಧಿಯಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇನ್ನು ಅನೇಕ ಅಭಿವೃದ್ಧಿ ಆಗಬೇಕಿತ್ತು. ಬಂಡವಾಳದ ಕೊರತೆಯಿಂದ ಸಾಧ್ಯವಾಗಲಿಲ್ಲ. ಜಿಲ್ಲೆಯ ಬೇರೆ ಸಹಕಾರ ಸಂಘಗಳಿಗೆ ಹೋಲಿಸಿದರೆ ನಮ್ಮ ಸಂಘ ಗೊಂದಲವಿಲ್ಲದೆ ನಡೆಯುತ್ತಿದೆ.
ಹಿಂದಿನ ಬಹುತೇಕ ಮಹನೀಯರು ಸಂಘವನ್ನ ಮುನ್ನಡೆಸಿಕೊಂಡು ಬಂದಿದ್ದಾರೆ. ಮುಂದಿನ ವರ್ಷ ಸುಮಾರು 25 ರಿಂದ 30 ಲಕ್ಷ ಲಾಭ ಬರುವ ನೀರಿಕ್ಷೆ ಇದೆ. ನಿಮ್ಮೆಲ್ಲರ ಸಹಕಾರ ಹೀಗೆ ಮುಂದುವರೆಯಲಿ. ಸಂಘದ ಚುನಾವಣೆ ಹತ್ತಿರದಲ್ಲಿದ್ದು, ಮತದಾನದ ಹಕ್ಕು ಎಲ್ಲರಿಗೂ ಸಿಗುವಂತೆ ವ್ಯವಸ್ಥೆ ಮಾಡಿಕೊಡುತ್ತೇವೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಇನ್ನೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಿನ್ನಂಬಳ್ಳಿ ಕೆ.ರಾಜು, ನಿರ್ದೇಶಕರಾದ ಸಿಂಧುವಳ್ಳಿ ಕೆಂಪಣ್ಣ, ವಿಜಯಕುಮಾರ್, ಮಂಜುನಾಥ್, ಸರ್ವೇಶ್, ಶಿವಕುಮಾರ್, ಹುಳಿಮಾವು, ಪರಶಿವಮೂರ್ತಿ ಮಹೇಶ್, ಹೆಚ್.ಎಂ ಮಂಜುಳಾ ಮಧು, ಸುನಂದ, ಸರ್ಕಾರದ ಪ್ರತಿನಿಧಿ ವಿಶ್ವಾಸ್, ಪ್ರಭಾರ ಕಾರ್ಯದರ್ಶಿ ಚಿನ್ನಸ್ವಾಮಿ, ಸಿಬ್ಬಂದಿಗಳಾದ ಮಲ್ಲು, ಹೇಮಾವತಿ, ಷಣ್ಮುಗ ಸ್ವಾಮಿ, ಆನಂದ, ರಮೇಶ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.

