ನಂಜನಗೂಡು: ಶಾಲೆಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕ್ಲಸ್ಟರ್ ಕಿಚನ್ ಪದ್ಧತಿಯನ್ನು ವಿರೋಧಿಸಿ, ನಂಜನಗೂಡಿನಲ್ಲಿ ಅಕ್ಷರ ದಾಸೋಹ ನೌಕರರು ಸೌಟು ಅನ್ನದ ಕೈ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಡುಗೆ ಸಿಬ್ಬಂದಿಗಳು ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿ ಮತ್ತು ರೈತ ಸಂಘ ಮತ್ತು ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.


ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷರಾದ ಕೆ.ಮಂಜುಳಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲ್ಲೂಕಿನ ಶಾಲೆಗಳ ಅಡುಗೆ ಸಿಬ್ಬಂದಿ ಭಾಗವಹಿಸಿ, ಅಂದು ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವುದನ್ನು ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಕೆ . ಮಂಜುಳಾ ಮಾತನಾಡಿ, ಯೋಜನೆ ಆರಂಭದಿಂದಲೂ ಶಾಲೆಗಳಲ್ಲಿಯೇ ಅಡುಗೆ ತಯಾರಿಸಿ ಮಕ್ಕಳಿಗೆ ಬಡಿಸಲಾಗುತ್ತಿದೆ. ಆದರೆ, ಕ್ಲಸ್ಟರ್ ಕಿಚನ್ ಪದ್ಧತಿ ಜಾರಿಗೆ ತರುವ ಮೂಲಕ ಅಡುಗೆ ಕೆಲಸವನ್ನು ಸಂಘ-ಸಂಸ್ಥೆಗಳು ಹಾಗೂ ಸ್ವಸಹಾಯ ಗುಂಪುಗಳಿಗೆ ವಹಿಸಲು ಮುಂದಾಗಿರುವುದು ಬಡ ಮಹಿಳಾ ಅಡುಗೆ ನೌಕರರ ಉದ್ಯೋಗಕ್ಕೆ ಕುತ್ತು ತರುವ ಕ್ರಮವಾಗಿದೆ.

ರಾಜ್ಯದಲ್ಲಿ ಸಾವಿರಾರು ಬಡ, ವಿಧವಾ ಹಾಗೂ ವಿಚ್ಛೇದಿತ ಮಹಿಳೆಯರು ಅಕ್ಷರ ದಾಸೋಹದ ಅಡುಗೆ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಅತ್ಯಲ್ಪ ಗೌರವಧನದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಉದ್ಯೋಗದಿಂದ ವಂಚಿತರನ್ನಾಗಿಸುವ ಕ್ಲಸ್ಟರ್ ಕಿಚನ್ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ಬಿಸಿಯೂಟದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೆ ವಹಿಸಬೇಕು. ಅಡುಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ, ಕೆಲಸದ ಅವಧಿಯನ್ನು ವಿಸ್ತರಿಸುವ ಮೂಲಕ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದು.

ಮೊಟ್ಟೆ ಖರೀದಿ ಸೇರಿದಂತೆ ಇತರೆ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಕ್ಲಸ್ಟರ್ ಕಿಚನ್ ವ್ಯವಸ್ಥೆ ಜಾರಿಯಾದರೆ ಮುಂದೆ ಖಾಸಗಿ ಸಂಸ್ಥೆಗಳು ಹಾಗೂ ಇತರೆ ಸಂಘಟನೆಗಳ ಹಿಡಿತಕ್ಕೆ ಯೋಜನೆ ಸಿಲುಕುವ ಆತಂಕವಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಪದ್ಧತಿಯನ್ನು ಕೈಬಿಟ್ಟು, ಈಗಿರುವ ಅಡುಗೆ ನೌಕರರ ಉದ್ಯೋಗ ಭದ್ರಪಡಿಸಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಮಾತನಾಡಿ, ಸರ್ಕಾರ ಕ್ಲಸ್ಟರ್ ಕಿಚನ್ ಪದ್ಧತಿ ಜಾರಿಗೆ ತರುವ ಮೂಲಕ ಹಲವು ವರ್ಷಗಳಿಂದ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಬಡ ಮಹಿಳಾ ಅಡುಗೆ ನೌಕರರ ಬದುಕನ್ನು ಬೀದಿಗೆ ತಳ್ಳಲು ಮುಂದಾಗಿದೆ. ಈಗಾಗಲೇ ಅತ್ಯಲ್ಪ ಗೌರವಧನದಲ್ಲಿ ಜೀವನ ಸಾಗಿಸುತ್ತಿರುವ ಅಡುಗೆ ಸಿಬ್ಬಂದಿಯ ಉದ್ಯೋಗ ಕಸಿದುಕೊಳ್ಳುವುದು ಸರಿಯಲ್ಲ.

ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸುವ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಯೇ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಲಸ್ಟರ್ ಕಿಚನ್ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳು ಹಾಗೂ ಸಂಘ-ಸಂಸ್ಥೆಗಳಿಗೆ ಅಡುಗೆ ಜವಾಬ್ದಾರಿ ವಹಿಸಲು ಮುಂದಾಗಿರುವುದು ಖಂಡನೀಯ. ಇದರಿಂದ ಸಾವಿರಾರು ಮಹಿಳೆಯರ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಲಿದೆ.

ಸರ್ಕಾರ ಕೂಡಲೇ ಕ್ಲಸ್ಟರ್ ಕಿಚನ್ ಯೋಜನೆಯನ್ನು ಕೈಬಿಟ್ಟು, ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸುವ ವ್ಯವಸ್ಥೆಯನ್ನು ಮುಂದುವರಿಸಬೇಕು. ಅಡುಗೆ ನೌಕರರ ಉದ್ಯೋಗಕ್ಕೆ ಭದ್ರತೆ ಕಲ್ಪಿಸಿ, ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ದಲಿತ ಸಂಘರ್ಷ ಸಮಿತಿ ಅಡುಗೆ ನೌಕರರ ಪರವಾಗಿ ಮುಂದಿನ ದಿನಗಳಲ್ಲೂ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಗ್ರೇಡ್ 2 ಕಿಶೋರ್ ಕುಮಾರ್ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಉಪಾಧ್ಯಕ್ಷರಾದ ನೀಲಮ್ಮ, ಕಾರ್ಯದರ್ಶಿ ಮಹದೇವಮ್ಮ , ಖಜಾಂಚಿ ನೇತ್ರಮ್ಮ, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸತೀಶ್ ರಾವ್, ಛಲವಾದಿ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ, ದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ಬ್ಯಾಳಾರು ಆನಂದ್, ಅಕ್ಷರ ದಾಸೋಹ ನೌಕರರ ಸಂಘದ ಪದಾಧಿಕಾರಿಗಳಾದ ಸುವರ್ಣ, ರೂಪ, ದೇವಮ್ಮ, ಗೀತಾ, ದೊಡ್ಡಮಣಿ, ಜಯಲಕ್ಷ್ಮೀ, ಸವಿತಾ, ಭಾಗ್ಯ ಸೇರಿದಂತೆ ರೈತ, ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.